ಬಾಲಿವುಡ್ ಮತ್ತು ದಕ್ಷಿಣ ಭಾರತದ ಸಿನಿಮಾದಲ್ಲಿ ಹೆಸರುವಾಸಿಯಾದ ನಟಿ ಹನ್ಸಿಕಾ ಮೊಟ್ವಾನಿ ಇದೀಗ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಚಾರದಿಂದಾಗಿ ಸುದ್ದಿಯಲ್ಲಿದ್ದಾರೆ. ‘ಬಿಂದಾಸ್’ ಸೇರಿದಂತೆ ಹಲವು ಕನ್ನಡ, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಹನ್ಸಿಕಾ, ಇದೀಗ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದು ಕ್ರಿಮಿನಲ್ ಮೊಕದ್ದಮೆ ರದ್ದತಿ ಕೋರಿ ಮನವಿ ಸಲ್ಲಿಸಿದ್ದಾರೆ.
ವಿವಾದವೇನು?
ವಿವಾದದ ಹಿನ್ನಲೆಯಲ್ಲಿ, ಹನ್ಸಿಕಾ ಅವರ ಸಹೋದರ ಪ್ರಶಾಂತ್ ಮೊಟ್ವಾನಿ ಪತ್ನಿ ಮುಸ್ಕಾನ್ ನ್ಯಾನ್ಸಿ ಅವರು 2024ರಲ್ಲಿ ತಮ್ಮ ಪತಿ, ಹನ್ಸಿಕಾ ಮತ್ತು ಅವರ ಪೋಷಕರ ವಿರುದ್ಧ ದೌರ್ಜನ್ಯ ಹಾಗೂ ಹಣಕಾಸು ವಂಚನೆಯ ಆರೋಪಗಳನ್ನು ಮಾಡಿದ್ದರು. ಮುಸ್ಕಾನ್ ತಾವು ಅನುಭವಿಸಿದ ಕಿರುಕುಳ, ದೌರ್ಜನ್ಯ, ಹಾಗೂ ಮಾನಸಿಕ ಹಿಂಸೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆ ಆರೋಪಿತರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿ ವಿಚಾರಣೆ ನಡೆಯುತ್ತಿದೆ.
ಇದೀಗ ಹನ್ಸಿಕಾ ಬಾಂಬೆ ಹೈಕೋರ್ಟ್ ಮೊರೆಹೋಗಿದ್ದು, ತಮಗೆ ಈ ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ತಮ್ಮ ಅರ್ಜಿಯಲ್ಲಿ ಮುಸ್ಕಾನ್ ತಮ್ಮಿಂದ 27 ಲಕ್ಷ ರೂಪಾಯಿ ಹಣ ಪಡೆದಿರುವುದಾಗಿ ಹಾಗೂ ಅದನ್ನು ಕೊಡದೆ ವಂಚಿಸಿರುವುದಾಗಿ ಆರೋಪಿಸಿದ್ದಾರೆ. ಅವರು ತಮ್ಮ ಸಹೋದರ ಪ್ರಶಾಂತ್ ಅವರ ಮದುವೆಗೆ ಹಣ ನೀಡಿದ್ದರೂ, ಆ ಹಣವನ್ನು ಮುಸ್ಕಾನ್ ವಾಪಸ್ಸು ನೀಡಿಲ್ಲ ಎಂದು ಕಿಡಿಕಾರಿದ್ದಾರೆ.
ಹನ್ಸಿಕಾ ಪರ ವಕೀಲರು ನ್ಯಾಯಾಲಯದಲ್ಲಿ ಸಲ್ಲಿಸಿದ ಮನವಿಯಲ್ಲಿ, “ಮುಸ್ಕಾನ್ ಮತ್ತು ಪ್ರಶಾಂತ್ ನಡುವಿನ ವೈವಾಹಿಕ ಸಮಸ್ಯೆಗಳ ನಡುವೆ ಹನ್ಸಿಕಾ ಅಥವಾ ಅವರ ಕುಟುಂಬದವರನ್ನು ಹೊಣೆದಾರರನ್ನಾಗಿ ಮಾಡುವುದು ನ್ಯಾಯಸಮ್ಮತವಲ್ಲ. ಪ್ರಕರಣದಲ್ಲಿ ಹನ್ಸಿಕಾ ಅವರ ಪಾತ್ರವಿಲ್ಲ. ಕೇವಲ ಕುಟುಂಬ ಸಂಬಂಧವನ್ನು ಆಧಾರವನ್ನಾಗಿ ಮಾಡಿಕೊಂಡು ಆರೋಪಿಸುವುದು ಅಸಂಗತವಾಗಿದೆ,” ಎಂದು ಉಲ್ಲೇಖಿಸಲಾಗಿದೆ.
ಇನ್ನೊಂದೆಡೆ, ಮುಸ್ಕಾನ್ ನ್ಯಾನ್ಸಿ ಕೂಡ ಒಂದು ಜನಪ್ರಿಯ ಟಿವಿ ಕಲಾವಿದೆಯಾಗಿದ್ದು, 2002ರಿಂದ ಹಿಂದಿ ಟಿವಿ ಕ್ಷೇತ್ರದಲ್ಲಿ ಹೆಸರು ಗಳಿಸಿದ್ದಾರೆ. ಅವರು ಸಲ್ಲಿಸಿದ ದೂರಿನಲ್ಲಿ, ಹನ್ಸಿಕಾ ಅವರ ಕುಟುಂಬದಿಂದ ದೌರ್ಜನ್ಯಕ್ಕೆ ಒಳಗಾಗಿ ತಮ್ಮ ಮುಖದ ಭಾಗವೊಂದು ಪಾರ್ಶ್ವವಾಯುವಿಗೆ ಒಳಪಟ್ಟಿದೆ ಎಂಬ ಗಂಭೀರ ಆರೋಪವನ್ನೂ ಅವರು ಮಾಡಿದ್ದಾರೆ.
ಇದೀಗ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಹನ್ಸಿಕಾ ಮೊಟ್ವಾನಿಯವರು ತಾವು ನಿರ್ದೋಷಿ ಎಂಬುದನ್ನು ಸಾಬೀತುಪಡಿಸಲು ಹೋರಾಟ ಆರಂಭಿಸಿದ್ದಾರೆ. ಅವರು ಕ್ರಿಮಿನಲ್ ಮೊಕದ್ದಮೆ ರದ್ದತಿ ಮನವಿ ಸಲ್ಲಿಸಿರುವುದರಿಂದ ಪ್ರಕರಣ ಇದೀಗ ನ್ಯಾಯಾಲಯ ತೀರ್ಪಿನ ಮೇಲಿದೆ.
ಹನ್ಸಿಕಾ ಅವರು ತಮ್ಮ ವೈವಾಹಿಕ ಜೀವನವನ್ನು ಉದ್ಯಮಿ ಸೋಹೆಲ್ ಕಾತುರಿಯಾ ಜೊತೆಗೆ ಮುಂದುವರೆಸಿದ್ದಾರೆ. 2022ರಲ್ಲಿ ಅವರು ವಿವಾಹವಾಗಿದ್ದು, ನಂತರವೂ ‘ರೌಡಿ ಬೇಬಿ’, ‘ಮ್ಯಾನ್’, ‘ಗಾಂಧಾರಿ’ ಸಿನಿಮಾಗಳಲ್ಲಿ ಅಭಿನಯಿಸುತ್ತಾ ತಮ್ಮ ನಟನಾ ವೃತ್ತಿಯನ್ನು ಮುಂದುವರೆಸಿದ್ದಾರೆ.
ಈ ಪ್ರಕರಣದ ವಿಚಾರಣೆ ಬಾಂಬೆ ಹೈಕೋರ್ಟ್‌ನಲ್ಲಿ ನಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ನ್ಯಾಯಾಲಯದ ತೀರ್ಪು ಇಡೀ ಪ್ರಕರಣಕ್ಕೆ ನಿರ್ಣಾಯಕ ತಿರುವು ನೀಡುವ ಸಾಧ್ಯತೆ ಇದೆ.





