‘ದೃಶ್ಯಂ 3’ OTT ರಿಲೀಸ್‌ಗೆ ಬಿಗ್ ಶಾಕ್: ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ

Untitled design 2026 06 18T123310.118

ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅಭಿನಯದ ಬಹುನಿರೀಕ್ಷಿತ ಕ್ರೈಮ್ ಥ್ರಿಲ್ಲರ್ ಚಿತ್ರ ‘ದೃಶ್ಯಂ 3’ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದು, ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಆದರೆ ಈ ನಡುವೆಯೇ ಒಟಿಟಿ ಬಿಡುಗಡೆಯ ವಿಚಾರದಲ್ಲಿ ಚಿತ್ರಕ್ಕೆ ಸಂಬಂಧಿಸಿದಂತೆ ಕಾನೂನು ತಿರುವು ಉಂಟಾಗಿದೆ.

ಚಿತ್ರದ ತೆಲುಗು ವರ್ಷನ್ ಅನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವುದಕ್ಕೆ ಮದ್ರಾಸ್ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆನೀಡಿದೆ. ಉಳಿದ ಭಾಷೆಗಳ ಆವೃತ್ತಿಗಳಿಗೆ ಯಾವುದೇ ತಡೆ ಇಲ್ಲದಿದ್ದರೂ, ತೆಲುಗು ವರ್ಷನ್ ಸ್ಟ್ರೀಮಿಂಗ್‌ಗೆ ಮಾತ್ರ ಈ ಆದೇಶ ಅನ್ವಯವಾಗಿರುವುದರಿಂದ ತೆಲುಗು ಪ್ರೇಕ್ಷಕರಿಗೆ ನಿರಾಶೆಯಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕಿ ಶ್ರೀಪ್ರಿಯಾ ಹಾಗೂ ಅವರ ಒಡೆತನದ ‘ರಾಜ್‌ಕುಮಾರ್ ಥಿಯೇಟರ್ಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆ ನ್ಯಾಯಾಲಯದ ಮೆಟ್ಟಿಲೇರಿದ್ದು, ‘ದೃಶ್ಯಂ’ ಫ್ರಾಂಚೈಸಿಯ ತೆಲುಗು ರಿಮೇಕ್ ಹಕ್ಕುಗಳು ಮತ್ತು ಸಂಬಂಧಿತ ಕಾನೂನು ಹಕ್ಕುಗಳು ತಮ್ಮ ಸಂಸ್ಥೆಗೆ ಸೇರಿದವು ಎಂದು ಹೇಳಿಕೊಂಡಿದ್ದಾರೆ. ಆದ್ದರಿಂದ, ಚಿತ್ರವನ್ನು ತೆಲುಗು ಭಾಷೆಯಲ್ಲಿ ಒಟಿಟಿಯಲ್ಲಿ ಪ್ರಸಾರ ಮಾಡುವುದು ತಮ್ಮ ಹಕ್ಕುಗಳಿಗೆ ಧಕ್ಕೆ ತರುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ತೆಲುಗು ವರ್ಷನ್‌ನ ಒಟಿಟಿ ಬಿಡುಗಡೆಗೆ ಸಂಪೂರ್ಣ ನಿಷೇಧ ಹೇರಬೇಕೆಂದು ಕೋರಿ ಅವರು ತುರ್ತು ಅರ್ಜಿ ಸಲ್ಲಿಸಿದ್ದರು. ಜೂನ್ 18 ರಂದು ಅಮೆಜಾನ್ ಪ್ರೈಮ್ ಒಟಿಟಿ ವೇದಿಕೆಯಲ್ಲಿ ‘ದೃಶ್ಯಂ 3’ ಚಿತ್ರ ಸ್ಟ್ರೀಮಿಂಗ್ ಆಗಲು ಸಿದ್ಧವಾಗಿದ್ದ ಸಂದರ್ಭದಲ್ಲೇ ಈ ಕಾನೂನು ಅಡ್ಡಿ ಎದುರಾಗಿದೆ.

ತುರ್ತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಕುಮರೇಶ್ ಬಾಬು ಅವರ ಪೀಠವು, ಪ್ರತಿವಾದಿಗಳಿಗೆ ಮುಂಚಿತ ನೋಟಿಸ್ ನೀಡಿದ್ದರೂ ಸಹ ಚಿತ್ರತಂಡ ಅಥವಾ ಅವರ ಪ್ರತಿನಿಧಿಗಳು ನ್ಯಾಯಾಲಯಕ್ಕೆ ಹಾಜರಾಗದಿರುವುದನ್ನು ಗಂಭೀರವಾಗಿ ಪರಿಗಣಿಸಿದೆ. ಈ ನಿರ್ಲಕ್ಷ್ಯದಿಂದ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯವು, ತಕ್ಷಣ ಜಾರಿಗೆ ಬರುವಂತೆ ತೆಲುಗು ವರ್ಷನ್ ಒಟಿಟಿ ಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ ವಿಧಿಸಿದೆ.

 ಆದೇಶದ ಪರಿಣಾಮವಾಗಿ, ಈಗ ತೆಲುಗು ಪ್ರೇಕ್ಷಕರು ಈ ಜನಪ್ರಿಯ ಕ್ರೈಮ್ ಥ್ರಿಲ್ಲರ್ ಚಿತ್ರವನ್ನು ವೀಕ್ಷಿಸಲು ಇನ್ನಷ್ಟು ದಿನಗಳ ಕಾಲ ಕಾಯಬೇಕಾಗಿದೆ. ಆದರೆ, ಇತರ ಭಾಷೆಗಳಾದ ಮಲಯಾಳಂ ಸೇರಿದಂತೆ ಉಳಿದ ಆವೃತ್ತಿಗಳ ಒಟಿಟಿ ಪ್ರಸಾರಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ತಿಳಿದುಬಂದಿದೆ.

ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಂಡು ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಗಳಿಸಿದ್ದ ‘ದೃಶ್ಯಂ 3’ ಈಗ ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕವೂ ಪ್ರೇಕ್ಷಕರ ಮನಸೆಳೆಯುತ್ತಿದೆ. ವಿಶೇಷವೆಂದರೆ, ಈ ಚಿತ್ರವನ್ನು ಮಲಯಾಳಂ ಮೂಲ ಭಾಷೆಯ ಜೊತೆಗೆ ಕನ್ನಡ, ತಮಿಳು ಮತ್ತು ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲೂ ವೀಕ್ಷಿಸುವ ಅವಕಾಶ ಒದಗಿಸಲಾಗಿದೆ. ಒಟಿಟಿ ಬಿಡುಗಡೆಯೊಂದಿಗೆ ಸಿನಿಮಾ ಮತ್ತೊಂದು ಹಂತದ ಜನಪ್ರಿಯತೆಯನ್ನು ಪಡೆಯುವ ನಿರೀಕ್ಷೆಯಿದೆ. ‘ದೃಶ್ಯಂ 3’ ಚಿತ್ರವು ಬಾಕ್ಸ್ ಆಫೀಸ್ ಯಶಸ್ಸಿನ ಜೊತೆಗೆ ಕಾನೂನು ವಿವಾದಗಳಿಗೂ ಕಾರಣವಾಗಿದೆ.

Exit mobile version