ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಹಾಗೂ ಧನ್ಯತಾ ದಂಪತಿ ಅಭಿಮಾನಿಗಳಿಗೆ ಗಣೇಶ ಚತುರ್ಥಿಯ ವಿಶೇಷ ಸಂದರ್ಭದಲ್ಲಿ ಸಿಹಿಸುದ್ದಿ ನೀಡಿದ್ದಾರೆ. ಇತ್ತೀಚೆಗಷ್ಟೇ ಗಂಡು ಮಗುವಿನ ಪೋಷಕರಾಗಿರುವ ಈ ಜೋಡಿ, ಇದೀಗ ತಮ್ಮ ಮುದ್ದಿನ ಮಗನ ಹೆಸರನ್ನು ಅಧಿಕೃತವಾಗಿ ರಿವೀಲ್ ಮಾಡಿದ್ದಾರೆ. ಡಾಲಿ ದಂಪತಿ ತಮ್ಮ ಮಗನಿಗೆ ‘ಎರೆಯ’ ಎಂದು ನಾಮಕರಣ ಮಾಡಿದ್ದಾರೆ.
ವಿಶೇಷ ರೀತಿಯಲ್ಲಿ ಮಗನ ಹೆಸರನ್ನು ಪರಿಚಯಿಸಿರುವ ಡಾಲಿ ಧನಂಜಯ್, ಕರ್ನಾಟಕದ ನಕ್ಷೆಯ ಮಧ್ಯದಲ್ಲಿ ‘ಎರೆಯ’ ಎಂಬ ಹೆಸರು ಇರುವ ವಿಶೇಷ ಡಾಲರ್ ಅನ್ನು ಮಾಡಿಸಿದ್ದಾರೆ. ಈ ಮೂಲಕ ಗಣೇಶ ಹಬ್ಬದ ದಿನವೇ ತಮ್ಮ ಮಗನ ಹೆಸರನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಹೆಸರು ರಿವೀಲ್ ಮಾಡಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
‘ಎರೆಯ’ ಹೆಸರಿನ ಅರ್ಥವೇನು?
‘ಎರೆಯ’ ಎಂಬ ಹೆಸರಿಗೆ ವಿಶೇಷ ಐತಿಹಾಸಿಕ ಹಾಗೂ ಪಾರಂಪರಿಕ ಹಿನ್ನೆಲೆಯಿದೆ. ಎರೆಯ ಎಂದರೆ ಒಡೆಯ, ಅಧಿಪತಿ ಎಂಬ ಅರ್ಥವಿದೆ. ಇತಿಹಾಸದಲ್ಲಿ ಚಾಲುಕ್ಯರ ಪ್ರಸಿದ್ಧ ದೊರೆ ಇಮ್ಮಡಿ ಪುಲಕೇಶಿ ಅವರ ಬಾಲ್ಯದ ಹೆಸರು ಕೂಡ ‘ಎರೆಯ’ ಎಂದೇ ಇತ್ತು ಎನ್ನಲಾಗಿದೆ.
ಈ ಹಿನ್ನೆಲೆಯನ್ನು ಉಲ್ಲೇಖಿಸಿರುವ ಡಾಲಿ ದಂಪತಿ, ತಮ್ಮ ಮಗನ ಹೆಸರಿನ ಅರ್ಥವನ್ನು ಭಾವನಾತ್ಮಕವಾಗಿ ವಿವರಿಸಿದ್ದಾರೆ. ರಾಜರ ಪಾರಂಪರಿಕತೆ ಮತ್ತು ಶಕ್ತಿಯುತ ಅರ್ಥವನ್ನು ಹೊಂದಿರುವ ಈ ಹೆಸರು ತಮ್ಮ ಪುಟ್ಟ ಮಗನಿಗೆ ಸೂಕ್ತವಾಗಿದೆ ಎಂಬ ಭಾವನೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
“ರಾಜರ, ಪಾರಂಪರಿಕ ಮತ್ತು ಶಕ್ತಿಯುತ ಅರ್ಥವನ್ನು ಹೊತ್ತಿರುವ ನಮ್ಮ ಪುಟ್ಟ ಬದುಕಿನ ಅಧಿಪತಿ, ನಮ್ಮ ಹೃದಯದ ರಾಜ ನಮ್ಮ ‘ಎರೆಯ’” ಎಂದು ಡಾಲಿ ಧನಂಜಯ್ ಹಾಗೂ ಧನ್ಯತಾ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ
ಕಳೆದ ವರ್ಷ ಮೈಸೂರಿನಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಧನಂಜಯ್ ಮತ್ತು ಧನ್ಯತಾ, ಸ್ಯಾಂಡಲ್‌ವುಡ್‌ನ ಮುದ್ದಾದ ಜೋಡಿಗಳಲ್ಲಿ ಒಬ್ಬರು. ಮದುವೆಯ ಬಳಿಕವೂ ತಮ್ಮ ವೈಯಕ್ತಿಕ ಜೀವನದ ಹಲವು ವಿಶೇಷ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾ ಬಂದಿದ್ದಾರೆ.
ಇತ್ತೀಚೆಗಷ್ಟೇ ಧನ್ಯತಾ ಅವರ ಬೇಬಿ ಬಂಪ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಈ ಜೋಡಿ, ‘ನಮ್ಮ ಪ್ರಪಂಚ ವಿಸ್ತರಿಸುತ್ತಿದೆ’ ಎಂಬ ಸಂದೇಶದ ಮೂಲಕ ಪೋಷಕರಾಗುತ್ತಿರುವ ಸಂತಸವನ್ನು ತಿಳಿಸಿದ್ದರು. ಇದೀಗ ಮಗನ ಆಗಮನದ ಬಳಿಕ ಆ ಪುಟ್ಟ ಕಂದನಿಗೆ ‘ಎರೆಯ’ ಎಂದು ಹೆಸರಿಟ್ಟಿರುವುದನ್ನು ಘೋಷಿಸಿದ್ದಾರೆ.
ಹೆಸರು ರಿವೀಲ್ ಆಗುತ್ತಿದ್ದಂತೆ ಡಾಲಿ ಧನಂಜಯ್ ಹಾಗೂ ಧನ್ಯತಾ ಅವರಿಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು ಶುಭಾಶಯಗಳನ್ನು ಕೋರುತ್ತಿದ್ದಾರೆ. ಗಣೇಶ ಹಬ್ಬದ ದಿನವೇ ಮಗನ ಹೆಸರನ್ನು ವಿಶೇಷವಾಗಿ ಪರಿಚಯಿಸಿರುವುದು ಅಭಿಮಾನಿಗಳ ಗಮನ ಸೆಳೆದಿದೆ.
