ವಿಕ್ರಮ್ ಮಗನ ಕನ್ನಡ ಪ್ರೇಮ.. ಶಿವಣ್ಣ, ರಿಷಬ್ ದಂಪತಿ ಫಿದಾ

Untitled design (22)

ಬೆಂಗಳೂರಿನಲ್ಲಿ ನಡೆದ ಅದ್ದೂರಿ ಸೈಮಾ ಪ್ರಶಸ್ತಿ ವೇದಿಕೆಯಲ್ಲಿ ತಮಿಳು ನಟ ಚಿಯಾನ್ ವಿಕ್ರಮ್ ಪುತ್ರ ಧ್ರುವ ವಿಕ್ರಮ್ ಕನ್ನಡದಲ್ಲೇ ಮಾತನಾಡಿಸುವ ಮೂಲಕ ಕನ್ನಡಿಗರ ಎದೆಗೆ ನೇರವಾಗಿ ಲಗ್ಗೆ ಇಟ್ಟಿದ್ದಾರೆ. ‘ಬೈಸನ್ ಕಾಲಮಾಡನ್’ ಚಿತ್ರದ ನಟನೆಗಾಗಿ ಬೆಸ್ಟ್ ತಮಿಳು ನಟ ಪ್ರಶಸ್ತಿ ಸ್ವೀಕರಿಸುತ್ತಾ, ಕೈಯಲ್ಲಿ ಪೇಪರ್ ಹಿಡಿದು ಅಚ್ಚುಕಟ್ಟಾಗಿ ಕನ್ನಡದಲ್ಲೇ ಮಾತನಾಡಿದ ಧ್ರುವ್ ವಿಕ್ರಮ್, ರಿಷಬ್ ಶೆಟ್ಟಿ ಬಗ್ಗೆ ಹೇಳಿದ್ದೇನು..?ಈ  ಹಾರ್ಟ್ ಟಚಿಂಗ್ ರಿಪೋರ್ಟ್ ಇಲ್ಲಿದೆ, ನೋಡಿ.

ಬೆಂಗಳೂರಿನ ಅಂಗಳದಲ್ಲಿ ಕಳೆಕಟ್ಟಿದ್ದ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭವು ಸ್ಯಾಂಡಲ್‌ವುಡ್ ಹಾಗೂ ಕಾಲಿವುಡ್ ಸ್ಟಾರ್‌ಗಳ ಸಂಗಮದಿಂದ ಅಕ್ಷರಶಃ ರಂಗೇರಿತ್ತು. ಗ್ಲಾಮರಸ್ ಲೈಟಿಂಗ್ಸ್ ಮತ್ತು ಸಾವಿರಾರು ಅಭಿಮಾನಿಗಳ ಕರಘೋಷದ ನಡುವೆ, ತಮಿಳಿನ ಸ್ಟಾರ್ ನಟ ಚಿಯಾನ್ ವಿಕ್ರಮ್ ಅವರ ಹೆಮ್ಮೆಯ ಪುತ್ರ ಧ್ರುವ ವಿಕ್ರಮ್ ಬೈಸನ್ ಕಾಲಮಾಡನ್ ಚಿತ್ರದ  ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸ್ವೀಕರಿಸಲು ವೇದಿಕೆ ಏರಿದಾಗ ಮೊದಲು ಕನ್ನಡದಲ್ಲೇ ಭಾಷಣ ಆರಂಭ ಮಾಡಿದ್ದು ನೋಡಿ ಇಡೀ ಸಭಾಂಗಣ ಹರ್ಷೋದ್ಗಾರದಿಂದ ಮೊಳಗಿತು.

ಪ್ರಶಸ್ತಿ ಸ್ವೀಕರಿಸಲು ಮೈಕ್ ಮುಂದೆ ಬಂದ ಧ್ರುವ ವಿಕ್ರಮ್ ಜೇಬಿನಿಂದ ಒಂದು ಕಾಗದವನ್ನು ಹೊರತೆಗೆದು, ತಾವು ಕನ್ನಡ ಭಾಷಣ ಬರೆದುಕೊಂಡು ಬಂದಿರುವುದನ್ನು ಬಹಿರಂಗಪಡಿಸಿದರು. ಪರಭಾಷೆಯ ಸ್ಟಾರ್ ನಟನೊಬ್ಬ ಕರ್ನಾಟಕದ ನೆಲದಲ್ಲಿ, ಕನ್ನಡಿಗರ ಎದುರು ಸ್ಪಷ್ಟವಾಗಿ ಕನ್ನಡದಲ್ಲೇ ಭಾಷಣ ಆರಂಭಿಸುತ್ತಿದ್ದಂತೆ  ಸಭೆಯಲ್ಲಿದ್ದ ಪ್ರೇಕ್ಷಕರು ಅಚ್ಚರಿ ಮತ್ತು ರೋಚಕತೆಯಿಂದ ಕೇಕೆ ಹಾಕಿದರು. ಈ ಕ್ಯೂಟ್ ಹಾಗೂ ಪ್ರಾಮಾಣಿಕ ಪ್ರಯತ್ನ ಕನ್ನಡಿಗರ ಮನಸ್ಸನ್ನು ಕ್ಷಣಾರ್ಧದಲ್ಲಿ ಗೆದ್ದುಕೊಂಡಿತು. ಇಷ್ಟೇ ಅಲ್ಲ ಮುಂಭಾಗದಲ್ಲೇ ಕುಳಿತಿದ್ದ  ಡಾ. ಶಿವರಾಜ್‌ಕುಮಾರ್ ಹಾಗು ಗೀತಕ್ಕ ಧ್ರುವ್ ಕನ್ನಡಕ್ಕೆ ಮನಸಾರೆ ಫಿದಾ ಆಗಿದ್ದಾರೆ.

ತಮ್ಮ ಭಾಷಣದ ಹೈಲೈಟ್ ಆಗಿ, ಕನ್ನಡದ ಹೆಮ್ಮೆಯ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಹೆಸರನ್ನು ಪ್ರಸ್ತಾಪಿಸಿದ ಧ್ರುವ್ ವಿಕ್ರಮ್, ಕಾಂತಾರ ಚಿತ್ರಕ್ಕಾಗಿ ರಿಷಬ್ ಸರ್ ಬೆಸ್ಟ್ ಆಕ್ಟರ್ ಪ್ರಶಸ್ತಿ ಪಡೆದಿದ್ದಾರೆ, ಅದೇ ವೇದಿಕೆಯಲ್ಲಿ ನಿಮ್ಮ ಜೊತೆ ಪ್ರಶಸ್ತಿ ಸ್ವೀಕರಿಸುತ್ತಿರುವುದು ನನಗೆ ಸಿಕ್ಕ ಅತಿ ದೊಡ್ಡ ಗೌರವ ಮತ್ತು ಹೆಮ್ಮೆಯ ವಿಚಾರ ಎಂದು ಮುಕ್ತಕಂಠದಿಂದ ಶ್ಲಾಘಿಸಿದರು. ರಿಷಬ್ ಶೆಟ್ಟಿಯವರ ಸಿನಿಮೀಯ ಜರ್ನಿಯಿಂದ ತಾವೂ ಪ್ರೇರಿತರಾಗಿರುವುದಾಗಿ ಹೇಳಿ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದರು.

ಮುಂದುವರಿದು ಮಾತನಾಡುತ್ತಾ, ನೀವು ಒಬ್ಬ ನಿಜವಾದ ಲೆಜೆಂಡ್ ಸರ್, ನಿಮ್ಮಿಂದ ನಾನು ಸಾಕಷ್ಟು ಸ್ಫೂರ್ತಿ ಪಡೆದಿದ್ದೇನೆ ಎಂದು ರಿಷಬ್ ಶೆಟ್ಟಿ ಅವರನ್ನು ಕೊಂಡಾಡಿದ ಧ್ರುವ ವಿಕ್ರಮ್, ಈ ಸುಂದರ ಕ್ಷಣವನ್ನು ತಮ್ಮ ಜೀವನಪೂರ್ತಿ ಮರೆಯುವುದಿಲ್ಲ ಎಂದು ಭಾವುಕರಾದರು. ವೇದಿಕೆಯಲ್ಲಿ ಇಬ್ಬರು ಸ್ಟಾರ್ ನಟರು ಪರಸ್ಪರ ಗೌರವ ಸೂಚಿಸಿದ ದೃಶ್ಯವು ಸ್ಯಾಂಡಲ್‌ವುಡ್ ಮತ್ತು ಕಾಲಿವುಡ್ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿತು.

ಒಂದು ಪರಭಾಷೆಯ ನಟ ಕರ್ನಾಟಕದ ವೇದಿಕೆಗೆ ಬಂದು, ಭಾಷೆಯನ್ನು ಗೌರವಿಸಿ ಕನ್ನಡದಲ್ಲೇ ಮಾತನಾಡಿದ ಈ ಅಪರೂಪದ ಘಟನೆಯು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ಸೌಂಡ್ ಮಾಡ್ತಿದೆ. ಕನ್ನಡಿಗರು ಧ್ರುವ ವಿಕ್ರಮ್ ಅವರ ವಿನೀತ ಸ್ವಭಾವ ಹಾಗೂ ಭಾಷೆಯ ಮೇಲಿನ ಗೌರವವನ್ನು ಕೊಂಡಾಡುತ್ತಿದ್ದು, ಈ ಸುಂದರ ನೆನಪು ಸದಾ ಸಿನಿಪ್ರಿಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಲಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version