ಟಾಕ್ಸಿಕ್ ಟೀಸರ್‌ಗೆ ಬೀಳುತ್ತಾ ಬ್ರೇಕ್.. ಟಾಕ್ಸಿಕ್ ಟೀಸರ್ ವಿರುದ್ಧ ದೂರು..!!

Untitled design 2026 01 10T123730.034

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್’ (Toxic) ಈಗ ಬಿಡುಗಡೆಗೂ ಮುನ್ನವೇ ವಿವಾದಕ್ಕೆ ಸಿಲುಕಿದ. ಚಿತ್ರದ ಟೀಸರ್‌ನಲ್ಲಿರುವ ದೃಶ್ಯಗಳು ಮತ್ತು ಸಂಭಾಷಣೆಗಳು ಸಾರ್ವಜನಿಕ ನೈತಿಕತೆಗೆ ಧಕ್ಕೆ ತರುವಂತಿವೆ ಹಾಗೂ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ ಎಂದು ಆರೋಪಿಸಿ ಸೆನ್ಸಾರ್ ಮಂಡಳಿಗೆ ದೂರು ನೀಡಲಾಗಿದೆ. ಇದರಿಂದಾಗಿ ಟೀಸರ್ ಪ್ರಸಾರಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದೆ.

ನಟ ಯಶ್ ಅಭಿನಯದ ಈ ಚಿತ್ರದ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಆದರೆ, ಇದರಲ್ಲಿ ಬಳಸಿರುವ ವಿಷಯಗಳು (Content) ವಯಸ್ಕರಿಗೆ ಮಾತ್ರ (Adult content) ಸೀಮಿತವಾಗಿರುವ ದೃಶ್ಯಗಳನ್ನು ಹೊಂದಿವೆ ಎಂದು ವಕೀಲ ಲೋಹಿತ್ ಹನುಮಪುರ ಅವರು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಅಧ್ಯಕ್ಷರಿಗೆ ದೂರು ದಾಖಲಿಸಿದ್ದಾರೆ. ಟೀಸರ್‌ನಲ್ಲಿ ಅತಿಯಾದ ಹಿಂಸೆ ಮತ್ತು ಅಶ್ಲೀಲವಾದ ಸೀನ್‌ಗಳಿದ್ದು, ಇದು ಯಾವುದೇ ಮುನ್ನೆಚ್ಚರಿಕೆ ಅಥವಾ ವಯೋಮಿತಿಯ ನಿರ್ಬಂಧವಿಲ್ಲದೆ ಯೂಟ್ಯೂಬ್‌ನಂತಹ ಸಾರ್ವಜನಿಕ ವೇದಿಕೆಗಳಲ್ಲಿ ಲಭ್ಯವಿದೆ ಎಂದು ಲೋಹಿತ್ ಹನುಮಪುರ ಆರೋಪಿಸಿದ್ದಾರೆ.

ದೂರಿನಲ್ಲಿರುವ ಪ್ರಮುಖ ಅಂಶಗಳು:
  1. ಸೆನ್ಸಾರ್ ಕಡ್ಡಾಯ: ಚಲನಚಿತ್ರಗಳಿಗೆ ಇರುವಂತೆ ಟೀಸರ್ ಮತ್ತು ಟ್ರೈಲರ್‌ಗಳಿಗೂ ಸೆನ್ಸಾರ್ ಪ್ರಮಾಣಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಬೇಕು.

  2. ನೈತಿಕತೆಯ ಮೇಲೆ ಏಟು: ಸೂಕ್ತ ಪ್ರಮಾಣೀಕರಣವಿಲ್ಲದೆ ಬಿಡುಗಡೆಯಾಗುತ್ತಿರುವ ಇಂತಹ ಟೀಸರ್‌ಗಳು ಅಪ್ರಾಪ್ತ ವಯಸ್ಕರ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ.

  3. ‘A’ ಪ್ರಮಾಣಪತ್ರದ ಬೇಡಿಕೆ: ಟೀಸರ್‌ನಲ್ಲಿ ತೀವ್ರವಾದ ಲೈಂಗಿಕ ವಿಷಯ ಅಥವಾ ಹಿಂಸಾಚಾರದ ಅಂಶಗಳಿರುವುದರಿಂದ ಇದಕ್ಕೆ ‘A’ (Adults Only) ಪ್ರಮಾಣಪತ್ರ ನೀಡುವುದು ಸೂಕ್ತ. ಪೋಷಕರ ಅನುಮತಿ ಇಲ್ಲದೆ ಮಕ್ಕಳು ಇಂತಹ ವಿಷಯಗಳನ್ನು ನೋಡುವುದು ಅಪಾಯಕಾರಿ.

  4. ತಿದ್ದುಪಡಿಗೆ ಆಗ್ರಹ: ತಕ್ಷಣವೇ ಟಾಕ್ಸಿಕ್ ಚಿತ್ರದ ನಿರ್ಮಾಪಕರಿಗೆ ಸೂಚನೆ ನೀಡಿ, ವಿವಾದಿತ ವಿಷಯಗಳನ್ನು ತೆಗೆದುಹಾಕಬೇಕು ಅಥವಾ ಸೂಕ್ತ ತಿದ್ದುಪಡಿ ಮಾಡಿ ಮರುಬಿಡುಗಡೆ ಮಾಡಬೇಕು.

ಒಂದು ವೇಳೆ ಸೆನ್ಸಾರ್ ಮಂಡಳಿಯು ಈ ದೂರಿನ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಅಥವಾ ಮುಂದಿನ ದಿನಗಳಲ್ಲಿ ಟೀಸರ್ ಮತ್ತು ಪ್ರಚಾರ ವೀಡಿಯೊಗಳಿಗೆ ಕಠಿಣ ಮಾರ್ಗಸೂಚಿಗಳನ್ನು ಜಾರಿಗೆ ತರದಿದ್ದರೆ, ಮಂಡಳಿಯ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ದೂರುದಾರ ಎಚ್ಚರಿಕೆ ನೀಡಿದ್ದಾರೆ.

ಸಾಮಾನ್ಯವಾಗಿ ಸಿನಿಮಾಗಳು ಬಿಡುಗಡೆಯಾಗುವ ಮುನ್ನ ಸೆನ್ಸಾರ್ ಪ್ರಕ್ರಿಯೆಗೆ ಒಳಪಡುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗುವ ಪ್ರಚಾರ ವೀಡಿಯೊಗಳು ಯಾವುದೇ ನಿಯಂತ್ರಣವಿಲ್ಲದೆ ಪ್ರಸಾರವಾಗುತ್ತಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ‘ಟಾಕ್ಸಿಕ್’ ತಂಡ ಈ ಬಗ್ಗೆ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

Exit mobile version