ಬಾಲಿವುಡ್ ನಟ ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ, ಮತ್ತು ಅಕ್ಷಯ್ ಖನ್ನಾ ನಟಿಸಿರುವ ಐತಿಹಾಸಿಕ ಚಿತ್ರ “ಛಾವ” ಬಾಕ್ಸ್ ಆಫೀಸ್‌ನಲ್ಲಿ ಅಪಾರ ಯಶಸ್ಸನ್ನು ಗಳಿಸಿದೆ. ‘ಛಾವ’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಗಾಗಿ ಪ್ರೇಕ್ಷಕರು ಆತುರದಿಂದ ಕಾಯುತ್ತಿದ್ದರು. ಆದರೆ ಈ ಸಿನಿಮಾ ಪೈರಸಿಗೆ ತುತ್ತಾಗಿದ್ದು, ನಿರ್ಮಾಪಕರಿಗೆ ಹಾಗೂ ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿದೆ. ಈ ಸಿನಿಮಾದ ಪೈರಸಿ ಲಿಂಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ವಿಕ್ಕಿ ಕೌಶಲ್ ನಟನೆಯ ‘ಛಾವ’ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 562 ಕೋಟಿ ರೂಪಾಯಿಗಿಂತ ಹೆಚ್ಚು ಗಳಿಕೆ ಮಾಡಿದೆ. ವಿದೇಶಗಳಲ್ಲಿಯೂ ಈ ಚಿತ್ರ ಯಶಸ್ಸು ಕಂಡಿದ್ದು, ಕಲೆಕ್ಷನ್ ನಲ್ಲೂ ಭರ್ಜರಿ ಸತಕ ಸಾಧಿಸಿದೆ. ಐತಿಹಾಸಿಕ ಹಿನ್ನೆಲೆಯ ಈ ಚಿತ್ರದಿಂದ ವಿಕ್ಕಿ ಕೌಶಲ್ ಅವರು ಹೆಸರು ಮಾಡಿದ್ದಾರೆ. ನಿರ್ಮಾಪಕರಿಗೆ ಭರ್ಜರಿ ಲಾಭವಾಗಿದೆ, ಆದರೆ ಪೈರಸಿಯಿಂದಾಗಿ ತೀವ್ರ ಸಮಸ್ಯೆ ಎದುರಾಗಿದೆ.
‘ಛಾವ’ ಸಿನಿಮಾವನ್ನು ಏಪ್ರಿಲ್ 11ರಂದು ನೆಟ್‌ಫ್ಲಿಕ್ಸ್‌ನಲ್ಲಿ ಒಟಿಟಿ ಮೂಲಕ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಆದರೆ, ಬಿಡುಗಡೆಗೂ ಮುನ್ನವೇ ಆನ್‌ಲೈನ್‌ನಲ್ಲಿ ಲೀಕ್ ಆಗಿರುವುದರಿಂದ ಒಟಿಟಿ ಬಿಸ್‌ನೆಸ್ ಮೇಲೆ ಪರಿಣಾಮ ಬೀರಲಿದೆ. ಸಿನಿಮಾ ಲೀಕ್ ಆಗಿರುವುದರಿಂದ ಒಟಿಟಿ ವೀಕ್ಷಕರು ಕಡಿಮೆ ಆಗಬಹುದು ಎಂಬ ಆತಂಕ ನಿರ್ಮಾಪಕರಲ್ಲಿ ಮೂಡಿದೆ.
ಈ ಸಿನಿಮಾವನ್ನು ‘ಮೆಡಾಕ್ ಫಿಲ್ಮ್ಸ್’ ಸಂಸ್ಥೆ ನಿರ್ಮಿಸಿದ್ದು, ಪೈರಸಿಯನ್ನು ತಡೆಯಲು ‘ಆಗಸ್ಟ್ ಎಂಟರ್‌ಟೇನ್ಮೆಂಟ್’ ಸಂಸ್ಥೆಯನ್ನು ನೇಮಕ ಮಾಡಲಾಗಿದೆ. ಈ ಸಂಸ್ಥೆಯ ಸಿಇಒ ರಜತ್ ರಾಹುಲ್ ಹಕ್ಸರ್ ಮುಂಬೈನ ಸೌತ್ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪೈರಸಿ ಮೂಲಕ 1818 ಲಿಂಕುಗಳ ಮೂಲಕ ಸಿನಿಮಾ ಶೇರ್ ಆಗಿರುವುದು ವರದಿಯಾಗಿದೆ.
ಲಕ್ಷ್ಮಣ್ ಉಟೇಕರ್ ನಿರ್ದೇಶನ ಮಾಡಿರುವ ‘ಛಾವ’ ಚಿತ್ರದಲ್ಲಿ ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ, ಅಕ್ಷಯ್ ಖನ್ನಾ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ತೆಲುಗು ಭಾಷೆಗೆ ಡಬ್ ಆಗಿ ಕೂಡ ಬಿಡುಗಡೆಗೊಂಡು ಉತ್ತಮ ಪ್ರತಿಕ್ರಿಯೆ ಪಡೆದಿದೆ. ಅಲ್ಲದೇ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಈ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.





