ಚಂದ್ರಮುಖಿ ಪ್ರಾಣಸಖಿ ಖ್ಯಾತಿಯ ನಟಿ ಭಾವನಾ ರಾಮಣ್ಣ, ಅವಳಿ ಮಕ್ಕಳಿಗೆ ಗರ್ಭ ಧರಿಸೋ ಮೂಲಕ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಭಾವನಾ ತೆಗೆದುಕೊಂಡ ಬೋಲ್ಡ್ ನಿರ್ಧಾರಕ್ಕೆ ಸ್ಯಾಂಡಲ್‌ವುಡ್ ಅಷ್ಟೇ ಅಲ್ಲ, ಕರುನಾಡೇ ಬೆಚ್ಚಿ ಬಿದ್ದಿದೆ. ಇಷ್ಟಕ್ಕೂ ಇದರ ಹಿಂದಿನ ಅಸಲಿಯತ್ತೇನು ಅನ್ನೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ. ಜಸ್ಟ್ ವಾಚ್.
- 40ನೇ ವಯಸ್ಸಲ್ಲಿ ಗರ್ಭಿಣಿ.. ಶಾಕ್ ಕೊಟ್ಟ ಭಾವನಾ
- IVF ಮೂಲಕ ಅವಳಿ ಮಕ್ಕಳಿಗೆ ಗರ್ಭಧರಿಸಿದ ನಟಿ
ಭಾವನಾ ರಾಮಣ್ಣ.. ಕನ್ನಡ ಚಿತ್ರರಂಗ ಕಂಡ ಅದ್ಭುತ ನಟಿಮಣಿಯರಲ್ಲಿ ಒಬ್ಬರು. ಚಂದ್ರಮುಖಿ ಪ್ರಾಣಸಖಿ ಚಿತ್ರ ಖ್ಯಾತಿಯ ಈಕೆ ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ಬಾರಿ ಸ್ಟೇಟ್ ಅವಾರ್ಡ್ ಪಡೆದಿದ್ದಾರೆ. ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಕೂಡ ಛಾಪು ಮೂಡಿಸಿರೋ ಭಾವನಾ, ಒಂಥರಾ ಪಂಚಭಾಷಾ ಅಭಿನೇತ್ರಿ.
ದಾವಣಗೆರೆ ಮೂಲದ ನಂದಿನಿ ರಾಮಣ್ಣನಿಗೆ ನಿರ್ದೇಶಕ ಕೋಡ್ಲು ರಾಮಕೃಷ್ಣ ಭಾವನಾ ರಾಮಣ್ಣ ಅಂತ ಹೆಸರು ಬದಲಿಸಿದ್ರು. ಶಾಸ್ತ್ರೀಯ ನೃತ್ಯಗಾರ್ತಿ ಆಗುವ ಕನಸು ಕಂಡಿದ್ದ ಭಾವನಾ, ಭರತನಾಟ್ಯ ಮಾಡುವಾಗ ಮರಿಬೆಲೆ ಚಿತ್ರತಂಡದ ಕಣ್ಣಿಗೆ ಬೀಳ್ತಾರೆ. ಅಲ್ಲಿಂದ ಆಕೆ ಸಿನಿಮಾ, ಸೀರಿಯಲ್, ರಾಜಕಾರಣ ಹೀಗೆ ಸಿಕ್ಕಾಪಟ್ಟೆ ಬ್ಯುಸಿ ಆಗ್ತಾರೆ. 40 ವರ್ಷಗಳಾಗಿದ್ರೂ ಇಂದಿಗೂ ಭಾವನಾ ಮದ್ವೆ ಆಗಿಲ್ಲ. ಆದ್ರೆ ಅವಳಿ ಮಕ್ಕಳಿಗೆ ಗರ್ಭ ಧರಿಸೋ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ಯೆಸ್.. ಭಾವನಾ ರಾಮಣ್ಣ ತಂದೆ ಇಲ್ಲದೆ ತಾಯಿ ಆಗ್ತಿರೋ ವಿಷಯ ತಿಳಿದು ಕನ್ನಡ ಚಿತ್ರರಂಗವಷ್ಟೇ ಅಲ್ಲ, ಇಡೀ ಕರುನಾಡೇ ಅಚ್ಚರಿಗೊಂಡಿದೆ. ಆದ್ರೆ ಆಕೆ ಮಾತ್ರ ತನ್ನ ನಿರ್ಧಾರವನ್ನು ಸ್ಪಷ್ಟತೆಯಿಂದ, ದಿಟ್ಟವಾಗಿ ತೆಗೆದುಕೊಂಡು ಆಗಿದೆ. ಆರು ತಿಂಗಳ ಗರ್ಭಿಣಿಯಾಗಿರೋ ಭಾವನಾ, ಬೇಬಿ ಬಂಪ್ ಫೋಟೋಸ್ ಸಮೇತ ತಾಯಿ ಆಗ್ತಿರೋ ಸಂಭ್ರಮವನ್ನು ಸಮಾಜದ ಮುಂದೆ ತೆರೆದಿಟ್ಟಿದ್ದಾರೆ.
ಭಾವನಾ ಹೊಸ ಅಧ್ಯಾಯ.. ಅವಳಿ ಮಕ್ಕಳಿಗೆ 6 ತಿಂಗಳ ಗರ್ಭಿಣಿ
ಹೊಸ ಅಧ್ಯಾಯ.. ಹೊಸ ಲಯ. ನಾನು ಇದನ್ನ ಹೇಳ್ತೀನಿ ಅಂತ ಎಂದಿಗೂ ಊಹಿಸಿರಲಿಲ್ಲ. ಆದ್ರೆ ನಾನಿಲ್ಲಿ ಅವಳಿ ಮಕ್ಕಳಿಗೆ 6 ತಿಂಗಳ ಗರ್ಭಿಣಿ ಆಗಿದ್ದೇನೆ. ಟ್ವೆಂಟೀಸ್ ಅಥ್ವಾ ಥರ್ಟೀಸ್‌ನಲ್ಲಿ ನನ್ನ ಮನಸ್ಸಲ್ಲಿ ತಾಯ್ತನದ ಆಸೆ ಇರಲಿಲ್ಲ. ಆದ್ರೆ 40 ವರ್ಷ ತುಂಬಿದಾಗ ನನಗೆ ಆ ಆಸೆಯನ್ನ ನಿರಾಕರಿಸಲಾಗಲಿಲ್ಲ. ಒಂಟಿ ಹೆಣ್ಣಾಗಿ, ಆ ದಾರಿ ಅಷ್ಟು ಸುಲಭವಾಗಿರಲಿಲ್ಲ. ಅನೇಕ IVF ಚಿಕಿತ್ಸಾಲಯಗಳು ನನ್ನನ್ನು ಸಂಪೂರ್ಣವಾಗಿ ತಿರಸ್ಕರಿಸಿದವು. ಆದ್ರೆ ನಂತ್ರ ನಾನು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರೋ ರೈನ್ಬೋ ಆಸ್ಪತ್ರೆಯಲ್ಲಿ ಡಾ. ಸುಷ್ಮಾರನ್ನು ಭೇಟಿಯಾದೆ. ನನ್ನ ನಿರ್ಧಾರವನ್ನು ಪ್ರಶ್ನಿಸದೆ ಸ್ವಾಗತಿಸಿದರು. ಆಕೆಯ ಸಹಾಯದಿಂದ ಮೊದಲ ಪ್ರಯತ್ನದಲ್ಲೇ ಗರ್ಭಿಣಿಯಾದೆ.
ನನ್ನ ತಂದೆ, ಒಡಹುಟ್ಟಿದವರು ಮತ್ತು ಪ್ರೀತಿಪಾತ್ರರು ಬಹಳ ಹೆಮ್ಮೆ ಹಾಗೂ ಪ್ರೀತಿಯಿಂದ ನನ್ನ ಜೊತೆ ನಿಂತರು. ಕೆಲವರು ನನ್ನ ಆಯ್ಕೆಯನ್ನು ಪ್ರಶ್ನಿಸಿದರು. ಆದ್ರೆ ನನ್ನ ಮನಸ್ಸಿಗೆ ಗೊತ್ತಿತ್ತು, ನಾ ಸಿದ್ದಳಾಗಿದ್ದೆ. ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು. ಆದ್ರೆ ಅವರು ಕಲೆ, ಸಂಗೀತ, ಸಂಸ್ಕೃತಿ ಮತ್ತು ಪ್ರೀತಿಯಿಂದ ತುಂಬಿದ ಮನೆಯಲ್ಲಿ ಬೆಳೆಯುತ್ತಾರೆ. ಅವರು ದಯೆ, ಆತ್ಮವಿಶ್ವಾಸ ಹಾಗೂ ಎಲ್ಲಿಂದ ಬಂದರು ಅನ್ನೋದ್ರ ಬಗ್ಗೆ ಹೆಮ್ಮೆ ಪಡುವಂತೆ ಬೆಳೆಯುತ್ತಾರೆ.
ನಾನು ದಂಗೆ ಏಳಲು ಈ ಮಾರ್ಗ ಆರಿಸಿಕೊಂಡಿಲ್ಲ. ನನ್ನ ಸತ್ಯವನ್ನು ಗೌರವಿಸಲು ಈ ಮಾರ್ಗ ಆರಿಸಿಕೊಂಡೆ. ನನ್ನ ಕಥೆ ಒಬ್ಬ ಹೆಣ್ಣಿಗಾದ್ರೂ ಸ್ಫೂರ್ತಿಯಾದ್ರೆ ಅಷ್ಟೇ ಸಾಕು. ಸದ್ಯದಲ್ಲೇ ಎರಡು ಪುಟ್ಟ ಆತ್ಮಗಳು ನನ್ನನ್ನು ಅಮ್ಮ ಎಂದು ಕರೆಯುತ್ತವೆ. ಅದೇ ಎಲ್ಲವೂ ಆಗಲಿದೆ. ನನ್ನ ಜೊತೆ ಹೆಜ್ಜೆ ಹಾಕಿದ ವೈದ್ಯರಿಗೆ ಧನ್ಯವಾದ ಎಂದು ನಟಿ ಭಾವನಾ ರಾಮಣ್ಣ ತಿಳಿಸಿದ್ದಾರೆ.
ಇದು ನಿಜಕ್ಕೂ ಸಿಕ್ಕಾಪಟ್ಟೆ ಬೋಲ್ಡ್ ಡಿಸಿಷನ್. ಪರಭಾಷೆಗಳಲ್ಲಿ ಹಾಗೂ ವಿದೇಶಿಗರು ಇಂತಹ ನಿರ್ಧಾರಗಳನ್ನು ತೆಗೆದುಕೊಂಡ ನಿದರ್ಶನವಿದೆ. ಆದ್ರೆ ಕನ್ನಡ ಹಾಗೂ ಕರ್ನಾಟಕದ ಮಟ್ಟಿಗೆ ಇದು ನಿಜಕ್ಕೂ ಅಚ್ಚರಿಯೇ ಸರಿ. ಆದ್ರೆ ಎಲ್ಲರಿಗೂ ಅವರದ್ದೇ ಆದ ಆಯ್ಕೆಗಳಿರುತ್ತೆ. ಅವುಗಳನ್ನು ಪ್ರತಿಯೊಬ್ಬರೂ ಗೌರವಿಸಲೇಬೇಕು. ಭಾವನಾ ಅವರ ಈ ನಡೆ, ಹೊಸ ಕ್ರಾಂತಿಗೆ ಮುನ್ನುಡಿ ಬರೆದಿದೆ. ತಾಯ್ತನವನ್ನು ಅನುಭವಿಸೋಕೆ ಕಾತರಳಾಗಿರೋ ಆಕೆಗೆ ಶುಭ ಕೋರೋಣ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





