ಕನ್ನಡ ಚಿತ್ರರಂಗದ ಖ್ಯಾತ ನಟಿ ಭಾವನಾ ರಾಮಣ್ಣ ತಮ್ಮ ಐವಿಎಫ್ (ಇನ್ ವಿಟ್ರೊ ಫರ್ಟಿಲೈಸೇಶನ್) ಚಿಕಿತ್ಸೆಯ ಮೂಲಕ ತಾಯಿಯಾಗುವ ತಮ್ಮ ನಿರ್ಧಾರದಿಂದ ಗಮನ ಸೆಳೆದಿದ್ದಾರೆ. ಈ ವಿಚಾರವು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗುರಿಯಾಗಿದೆ. ಕೆಲವರು ಇದನ್ನು ಧೈರ್ಯದ ನಡೆ ಎಂದು ಕೊಂಡಾಡಿದರೆ, ಇನ್ನು ಕೆಲವರು ಟೀಕೆ, ಟಿಪ್ಪಣಿಗಳನ್ನು ಮಾಡಿದ್ದಾರೆ. ಆದರೆ ಭಾವನಾ ತಮ್ಮ ನಿರ್ಧಾರದ ಬಗ್ಗೆ ತಲೆಕೆಡಿಸಿಕೊಳ್ಳದೆ, ಹೆಮ್ಮೆಯಿಂದ ಮಾತನಾಡುತ್ತಿದ್ದಾರೆ. ತಮ್ಮ ಐವಿಎಫ್ ಪ್ರಯಾಣದ ಬಗ್ಗೆ ಭಾವನಾ, ವೀರ್ಯ ದಾನಿಯ ಆಯ್ಕೆಯ ಬಗ್ಗೆಯೂ ಮುಕ್ತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಐವಿಎಫ್ ಎಂದರೇನು?
ಐವಿಎಫ್ ಎನ್ನುವುದು ಒಂದು ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನವಾಗಿದೆ. ಇದರಲ್ಲಿ ಮಹಿಳೆಯಿಂದ ತೆಗೆದ ಅಂಡಾಣುವನ್ನು ಮತ್ತು ದಾನಿಯಿಂದ ಪಡೆದ ವೀರ್ಯವನ್ನು ಪ್ರಯೋಗಾಲಯದಲ್ಲಿ ಸಂಯೋಜಿಸಿ ಭ್ರೂಣವನ್ನು ರಚಿಸಲಾಗುತ್ತದೆ. ಬಳಿಕ ಈ ಭ್ರೂಣವನ್ನು ಮಹಿಳೆಯ ಗರ್ಭಕೋಶಕ್ಕೆ ವರ್ಗಾಯಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ದಾನಿಯ ಆರೋಗ್ಯ, ವಯಸ್ಸು, ವಂಶವಾಹಿ ಹಿನ್ನೆಲೆ ಮುಂತಾದ ಅಂಶಗಳನ್ನು ಎಚ್ಚರಿಕೆಯಿಂದ ಪರಿಗಣಿಸಲಾಗುತ್ತದೆ. ಭಾವನಾ ಈ ಪ್ರಕ್ರಿಯೆಯನ್ನು ಬೆಂಗಳೂರಿನಲ್ಲೇ ಮಾಡಿಸಿಕೊಂಡಿದ್ದಾರೆ. “ನನ್ನ ಆಪ್ತರು ದೆಹಲಿಗೆ ಹೋಗುವಂತೆ ಸಲಹೆ ಕೊಟ್ಟಿದ್ದರು. ಆದರೆ ನಾನು ಯಾಕೆ ಭಯಪಡಬೇಕು? ಎಲ್ಲರಿಗೂ ಗೊತ್ತಾಗಲಿ ಎಂದು ಬೆಂಗಳೂರಿನಲ್ಲೇ ಚಿಕಿತ್ಸೆಗೆ ಒಳಗಾದೆ,” ಎಂದು ಭಾವನಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ವೀರ್ಯ ದಾನಿಯ ಆಯ್ಕೆಯ ಬಗ್ಗೆ ಭಾವನಾ ಮಾತನಾಡುತ್ತಾ, “ದಾನಿಯ ಆಯ್ಕೆಗೆ ಕೆಲವು ಕಟ್ಟುನಿಟ್ಟಾದ ನಿಯಮಾವಳಿಗಳಿವೆ. ರಕ್ತ ಪರೀಕ್ಷೆ, ದೈಹಿಕ ಮತ್ತು ಮಾನಸಿಕ ಆರೋಗ್ಯ, ಕ್ರಿಮಿನಲ್ ಹಿನ್ನೆಲೆಯನ್ನು ಪರಿಶೀಲಿಸಲಾಗುತ್ತದೆ. ನಾನು ವೈದ್ಯರನ್ನು ಸಂಪೂರ್ಣವಾಗಿ ನಂಬಿದ್ದೇನೆ. ಆದರೆ, ದಕ್ಷಿಣ ಭಾರತದ ದಾನಿಯನ್ನೇ ಆಯ್ಕೆ ಮಾಡಬೇಕೆಂದು ಕೇಳಿದ್ದೆ,” ಎಂದು ತಿಳಿಸಿದ್ದಾರೆ. ಆಹಾರ ಶೈಲಿ, ಜೀನ್ಸ್, ಡಿಎನ್ಎ ಸಾಮ್ಯತೆಯಿರುವ ದಾನಿಯನ್ನು ಆಯ್ಕೆ ಮಾಡಲು ಭಾವನಾ ಒತ್ತು ಕೊಟ್ಟಿದ್ದಾರೆ. “ದೆಹಲಿಗೆ ಹೋಗಿದ್ದರೆ ಉತ್ತರ ಭಾರತದ ದಾನಿಯ ಸಾಧ್ಯತೆಯಿತ್ತು. ಆದರೆ ನಾನು ದಕ್ಷಿಣ ಭಾರತದ ದಾನಿಯನ್ನೇ ಬಯಸಿದೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೆಲವು ಸ್ನೇಹಿತರು ತಾವೇ ದಾನಿಯಾಗಲು ಸಿದ್ಧರಿದ್ದಾರೆ ಎಂದು ಹೇಳಿದ್ದರಂತೆ. ಆದರೆ ಭಾವನಾ ಈ ಆಯ್ಕೆಯನ್ನು ತಿರಸ್ಕರಿಸಿದ್ದಾರೆ. “ಒಬ್ಬ ಸ್ನೇಹಿತ ಹೇಳಿದ್ದು ನನಗೆ ಸರಿಯೆನಿಸಿತು. ‘ನಾಳೆ ಮಕ್ಕಳು ನಮ್ಮ ಮುಂದೆ ಓಡಾಡುವಾಗ, ನಾವು ದಾನಿಗಳೆಂದು ಹೇಳದೆ ಇರಲು ಕಷ್ಟವಾಗಬಹುದು’ ಎಂದಿದ್ದರು. ಇದು ನನಗೂ ಸರಿಯೆಂದು ತೋರಿತ್ತು. ಒಂದು ವೇಳೆ ನಾನು ಜವಾಬ್ದಾರಿಯನ್ನು ಹಂಚಿಕೊಳ್ಳಬೇಕೆಂದು ಕೇಳಿದರೆ, ತೊಂದರೆಯಾಗಬಹುದು. ಹಾಗಾಗಿ, ವೈದ್ಯರ ಆಯ್ಕೆಯನ್ನೇ ಸ್ವೀಕರಿಸಿದೆ,” ಎಂದು ಭಾವನಾ ವಿವರಿಸಿದ್ದಾರೆ.
ಭಾವನಾ ಅವರ ಈ ನಿರ್ಧಾರವನ್ನು ಕೆಲವರು ಒಂಟಿ ತಾಯ್ತನದ ಧೈರ್ಯದ ಕಥೆ ಎಂದು ಕೊಂಡಾಡಿದರೆ, ಇನ್ನು ಕೆಲವರು ಸಾಂಪ್ರದಾಯಿಕ ದೃಷ್ಟಿಕೋನದಿಂದ ಟೀಕಿಸಿದ್ದಾರೆ. ಆದರೆ, ಭಾವನಾ ತಮ್ಮ ಆಯ್ಕೆಯ ಬಗ್ಗೆ ಯಾವುದೇ ಸಂಕೋಚವಿಲ್ಲದೇ ಮಾತನಾಡುತ್ತಿದ್ದಾರೆ. “ದೊಡ್ಡ ಆಸ್ಪತ್ರೆ ಬ್ರಾಂಡ್‌ಗಳಿವೆ. ವೈದ್ಯರನ್ನು ನಂಬಿದರೆ, ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ,” ಎಂದು ಅವರು ಆತ್ಮವಿಶ್ವಾಸದಿಂದ ಹೇಳಿದ್ದಾರೆ.





