ಚೆನ್ನೈ, ಜೂನ್ 10: ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ತಮಿಳು ನಿರ್ದೇಶಕ, ನಟ ಮತ್ತು ಪುಟ್ಟಣ್ಣ ಕಣಗಾಲ್ ಅವರ ಶಿಷ್ಯ ಭಾರತಿರಾಜ (Bharathiraja) ಇಂದು ಮುಂಜಾನೆ ಚೆನ್ನೈನಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು, ಕಳೆದ ಕೆಲವು ದಿನಗಳಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು (ಜೂನ್ 10) ಬೆಳಗ್ಗೆ ಅವರು ಕೊನೆಯುಸಿರೆಳೆದರು.
ಭಾರತಿರಾಜ ಅವರು 1970ರ ದಶಕದಲ್ಲಿ ಚಿತ್ರರಂಗ ಪ್ರವೇಶಿಸಿ, ತಮಿಳು ಸಿನಿಮಾ ಶೈಲಿಯನ್ನು ಹೊಸ ದಿಕ್ಕಿಗೆ ಕೊಂಡೊಯ್ದ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಗ್ರಾಮೀಣ ಜೀವನದ ನೈಜ ಚಿತ್ರಣ, ಭಾವನಾತ್ಮಕ ಕಥನ ಶೈಲಿ ಹಾಗೂ ಸಾಮಾಜಿಕ ವಿಷಯಗಳನ್ನು ಆಧರಿಸಿದ ಚಿತ್ರಗಳು ಅವರ ವಿಶೇಷತೆ ಆಗಿತ್ತು. 1977ರಲ್ಲಿ ಬಿಡುಗಡೆಯಾದ ‘16 ವಯತಿನಿಲೆ’ ಚಿತ್ರದಿಂದ ಅವರು ನಿರ್ದೇಶಕರಾಗಿ ಭಾರಿ ಯಶಸ್ಸು ಗಳಿಸಿದರು.
ಅದಾದ ನಂತರ ಅವರು ‘ಕಿಳಕ್ಕೇ ಪೋಗಮ್ ರೈಲ್’, ‘ಸಿಗಪ್ಪು ರೋಜಕ್ಕಲ್’, ‘ಅಲೈಗಲ್ ಒಯಿವತಿಲ್ಲೈ’, ‘ಕಾದಲ್ ಓವಿಯಂ’, ‘ಮುದಲ್ ಮರಿಯಥೈ’ ಸೇರಿದಂತೆ ಅನೇಕ ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಈ ಚಿತ್ರಗಳು ಕೇವಲ ಮನರಂಜನೆ ಮಾತ್ರವಲ್ಲದೆ, ಸಾಮಾಜಿಕ ಸಂದೇಶಗಳನ್ನೂ ಒಳಗೊಂಡಿದ್ದವು. ವಿಶೇಷವಾಗಿ ಯುವಜನತೆ ಮತ್ತು ಗ್ರಾಮೀಣ ಜೀವನದ ಕಥೆಗಳು ಅವರ ಚಿತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದವು.
ಭಾರತಿರಾಜ ಅವರ ನಿರ್ದೇಶನ ಶೈಲಿಯು ಭಾರತೀಯ ಚಿತ್ರರಂಗದಲ್ಲಿ ಹೊಸ ತಲೆಮಾರಿಗೆ ಪ್ರೇರಣೆಯಾಗಿತ್ತು. ಅನೇಕ ನಿರ್ದೇಶಕರು ಅವರ ಶೈಲಿಯನ್ನು ಅನುಸರಿಸಿ ಚಿತ್ರಗಳನ್ನು ನಿರ್ಮಿಸಿದ್ದಾರೆ. ತಮಿಳು ಮಾತ್ರವಲ್ಲದೆ ತೆಲುಗು ಚಿತ್ರರಂಗದಲ್ಲಿಯೂ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ‘ಸೀತಕೋಕ ಚಿಲುಕ’, ‘ಆರಾಧನಾ’, ‘ಜಮದಗ್ನಿ’, ‘ಎರ್ರಾ ಗುಲಾಬಿಲು’ ಸೇರಿದಂತೆ ಹಲವಾರು ತೆಲುಗು ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆ ಪಡೆದಿವೆ.
ಅವರ ಜೀವನದಲ್ಲಿ ಕನ್ನಡ ಚಿತ್ರರಂಗದೊಂದಿಗೆ ಸಹ ಒಂದು ವಿಶೇಷ ಸಂಪರ್ಕವಿತ್ತು. ಖ್ಯಾತ ಕನ್ನಡ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಬಳಿ ಅವರು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಆದರೂ ಅವರು ಕನ್ನಡದಲ್ಲಿ ಸ್ವತಂತ್ರವಾಗಿ ಚಿತ್ರ ನಿರ್ದೇಶನ ಮಾಡಲಿಲ್ಲ.
ಭಾರತಿರಾಜ ಅವರ ಕೊನೆಯ ನಿರ್ದೇಶನ ಚಿತ್ರ ‘ಮೀಂದುಮ್ ಒರು ಮರಿಯಾದೈ’ 2020ರಲ್ಲಿ ಬಿಡುಗಡೆಯಾಯಿತು. ನಂತರ ಅವರು ಚಿತ್ರ ನಿರ್ದೇಶನದಿಂದ ದೂರ ಉಳಿದುಕೊಂಡಿದ್ದರು. ಅವರು ನಟನಾಗಿಯೂ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು ಮತ್ತು ತಮ್ಮ ಬಹುಮುಖ ಪ್ರತಿಭೆಯಿಂದ ಮೆಚ್ಚುಗೆ ಪಡೆದಿದ್ದರು.
ಭಾರತಿರಾಜ ಅವರ ಪುತ್ರ ಮನೋಜ್ ಭಾರತಿರಾಜ ಕಳೆದ ವರ್ಷ ನಿಧನರಾದರು. ಈ ಘಟನೆ ಅವರನ್ನು ತೀವ್ರವಾಗಿ ಕುಗ್ಗಿಸಿತು. ಆ ದುಃಖದಿಂದ ಚೇತರಿಸಿಕೊಳ್ಳಲು ಅವರಿಗೆ ಹೆಚ್ಚು ಸಮಯ ಬೇಕಾಯಿತು. ನಂತರ ಅವರು ಸಾರ್ವಜನಿಕ ಜೀವನದಿಂದ ಸ್ವಲ್ಪ ದೂರವಿದ್ದು ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದರು.
ಭಾರತಿರಾಜ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ನಿರ್ದೇಶಕರು, ನಟರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.





