ಬಹುನಿರೀಕ್ಷಿತ ‘ಅಯೋಗ್ಯ-2’ ಸಿನಿಮಾ ಇಂದು ರಾಜ್ಯಾದ್ಯಂತ ತೆರೆಗೆ

ಕೈಗೊಳ್ಳಲಿರುವ (51)

ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಅಭಿನಯದ ಬಹುನಿರೀಕ್ಷಿತ ‘ಅಯೋಗ್ಯ-2’ ಸಿನಿಮಾ ಇಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಮೊದಲ ಭಾಗವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದರಿಂದ, ಅದರ ಮುಂದುವರಿದ ಭಾಗವಾಗಿರುವ ಈ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ಈಗಾಗಲೇ ಚಿತ್ರದ ಹಾಡುಗಳು ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಸಿನಿಮಾ ಕೂಡ ಅದೇ ಮಟ್ಟದಲ್ಲಿ ಪ್ರೇಕ್ಷಕರನ್ನು ರಂಜಿಸಲಿದೆ ಎಂಬ ವಿಶ್ವಾಸದಲ್ಲಿ ಚಿತ್ರತಂಡವಿದೆ. ಇದೇ ವೇಳೆ ನಾಯಕ ನಟ ನೀನಾಸಂ ಸತೀಶ್ ಚಿತ್ರದ ಕುರಿತು ಹಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಚಿತ್ರದ ಟ್ರೇಲರ್ ಬಿಡುಗಡೆ ದಿನ ಮಾತನಾಡಿದ ಸತೀಶ್, ಈಗಾಗಲೇ ‘ಅಯೋಗ್ಯ’ ಚಿತ್ರದ ಕಥೆ ಹಾಗೂ ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದಿರುವುದರಿಂದ, ಹೊಸ ಟ್ರೇಲರ್ ಅಗತ್ಯವಿಲ್ಲವೆಂದು ತಂಡ ನಿರ್ಧರಿಸಿದೆ. ಜೊತೆಗೆ, ಹಾಡುಗಳ ಮೂಲಕವೇ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರಬೇಕು ಎಂಬುದು ಚಿತ್ರತಂಡದ ಲೆಕ್ಕಾಚಾರವಾಗಿತ್ತು. ಮೊದಲ ಭಾಗದಂತೆ ಈ ಬಾರಿಯ ಹಾಡುಗಳೂ ಜನಪ್ರಿಯವಾಗಿದ್ದು, ಸಿನಿಮಾ ನೋಡಲು ಬಂದವರು ನಗದೇ ಹಿಂದಿರುಗುವುದಿಲ್ಲ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

‘ಅಯೋಗ್ಯ-2’ ಚಿತ್ರದ ವಿಶೇಷತೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಸತೀಶ್, ಮೊದಲ ಭಾಗದಲ್ಲಿ ಕೇವಲ ಒಂದು ಮತದ ಅಂತರದಿಂದ ಗೆದ್ದ ನಾಯಕನ ಕಥೆ ಅಂತ್ಯಗೊಂಡಿತ್ತು. ಆದರೆ ಎರಡನೇ ಭಾಗದಲ್ಲಿ ಗೆಲುವಿನ ನಂತರ ಎದುರಾಗುವ ಸವಾಲುಗಳು, ವಿರೋಧಿ ಬಣದ ಕುತಂತ್ರಗಳು ಹಾಗೂ ಪಂಚಾಯಿತಿಯಲ್ಲಿ ‘ಅಯೋಗ್ಯ’ನ ಹಾವಳಿ ಹೇಗಿರುತ್ತದೆ ಎಂಬುದನ್ನು ಮನರಂಜನೆಯೊಂದಿಗೆ ಕಟ್ಟಿಕೊಡಲಾಗಿದೆ ಎಂದು ತಿಳಿಸಿದ್ದಾರೆ. =

ಚಿತ್ರ ಬಿಡುಗಡೆಯಾಗುವ ಮುನ್ನವೇ ನಿರ್ಮಾಪಕರು ಸಂತೋಷದಲ್ಲಿರುವ ಕಾರಣವನ್ನೂ ಸತೀಶ್ ವಿವರಿಸಿದ್ದಾರೆ. ಚಿತ್ರದ ಬಹುತೇಕ ವ್ಯವಹಾರಗಳು ಈಗಾಗಲೇ ಪೂರ್ಣಗೊಂಡಿದ್ದು, ಆಡಿಯೋ ಹಕ್ಕುಗಳು ಉತ್ತಮ ಬೆಲೆಗೆ ಮಾರಾಟವಾಗಿವೆ. ಚಿತ್ರವನ್ನು ಬಿಡುಗಡೆ ಮಾಡಲು ಹಲವು ವಿತರಕರು ಆಸಕ್ತಿ ತೋರಿದರೂ, ಕೊನೆಗೆ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ವಿತರಣೆಯ ಹೊಣೆ ಹೊತ್ತಿದೆ. ಸ್ಯಾಟಲೈಟ್ ಹಾಗೂ ಓಟಿಟಿ ಹಕ್ಕುಗಳಿಗೂ ಉತ್ತಮ ಬೇಡಿಕೆ ವ್ಯಕ್ತವಾಗಿದ್ದು, ತಮ್ಮ ವೃತ್ತಿಜೀವನದಲ್ಲೇ ಈ ಚಿತ್ರಕ್ಕೆ ಅತ್ಯುತ್ತಮ ವ್ಯವಹಾರ ನಡೆದಿರುವುದಾಗಿ ತಿಳಿಸಿದ್ದಾರೆ.

ಈ ಬಾರಿ ತಮ್ಮ ಪಾತ್ರದಲ್ಲೂ ಸಾಕಷ್ಟು ಬದಲಾವಣೆಗಳಿವೆ ಎಂದು ಸತೀಶ್ ಹೇಳಿದ್ದಾರೆ. ಮೊದಲ ಭಾಗದ ‘ಅಯೋಗ್ಯ’ನಿಗಿಂತ ಈ ಭಾಗದ ಪಾತ್ರ ಹೆಚ್ಚು ಪರಿಪಕ್ವವಾಗಿದೆ. ಕಾಸ್ಟ್ಯೂಮ್, ಮಾತಿನ ಶೈಲಿ, ಹಾವಭಾವ ಮತ್ತು ಆಲೋಚನಾ ವಿಧಾನದಲ್ಲಿಯೂ ಹೊಸತನ ಕಾಣಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.

ಚಿತ್ರದ ಬಗ್ಗೆ ಮಾತನಾಡಿದ ಅವರು, ಜನರು ಕಾಲಕ್ಕೆ ತಕ್ಕಂತೆ ಬದಲಾಗಬಹುದು, ಆದರೆ ಹಳ್ಳಿಯ ಬದುಕಿನ ಆತ್ಮ ಬದಲಾಗುವುದಿಲ್ಲ ಎಂದಿದ್ದಾರೆ. ಮೊದಲ ಭಾಗದಲ್ಲಿ ಕಂಡ ಅದೇ ಹಳ್ಳಿ ಈ ಚಿತ್ರದಲ್ಲೂ ಮುಂದುವರಿದಿದ್ದರೂ, ಅಲ್ಲಿನ ಜನರು ಮತ್ತು ಪರಿಸ್ಥಿತಿಗಳು ಬದಲಾಗಿವೆ. ಹಲವು ವರ್ಷಗಳ ಬಳಿಕ ಅದೇ ಲೋಕಕ್ಕೆ ಮರಳಿದ ಅನುಭವವನ್ನು ಪ್ರೇಕ್ಷಕರು ಪಡೆಯಲಿದ್ದಾರೆ. ಮನರಂಜನೆಗೆ ಯಾವುದೇ ಕೊರತೆಯಿಲ್ಲದ ಈ ಚಿತ್ರ ಕುಟುಂಬ ಸಮೇತರಾಗಿ ನೋಡುವಂತ ಉತ್ತಮ ಮನರಂಜನಾ ಚಿತ್ರವಾಗಿದ್ದು, ತಮ್ಮ ಹಾಗೂ ರಚಿತಾ ರಾಮ್ ಅವರ ಜೋಡಿಯೂ ಈ ಬಾರಿ ಇನ್ನಷ್ಟು ಹೊಸತನದೊಂದಿಗೆ ಮೂಡಿಬಂದಿದೆ ಎಂಬ ವಿಶ್ವಾಸವನ್ನು ನೀನಾಸಂ ಸತೀಶ್ ವ್ಯಕ್ತಪಡಿಸಿದ್ದಾರೆ.

 

Exit mobile version