ಶ್ರೀವಿಷ್ಣುಗೆ ಜೋಡಿಯಾದ ಆಶಿಕಾ ರಂಗನಾಥ್; ಟಾಲಿವುಡ್‌ನಲ್ಲಿ ಮತ್ತೊಂದು ಬಿಗ್ ಚಾನ್ಸ್!

ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (68)

ಸ್ಯಾಂಡಲ್‌ವುಡ್‌ನ ನಟಿ ಆಶಿಕಾ ರಂಗನಾಥ್ ಇದೀಗ ಟಾಲಿವುಡ್‌ನಲ್ಲಿ ತಮ್ಮ ಛಾಪು ಮೂಡಿಸಲು ಸಜ್ಜಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳ ಮೂಲಕ ಗಮನ ಸೆಳೆದಿರುವ ಆಶಿಕಾ, ಸದ್ಯ ತೆಲುಗು ಚಿತ್ರರಂಗದಲ್ಲಿ ಸಾಲು ಸಾಲು ಅವಕಾಶಗಳನ್ನು ಪಡೆಯುತ್ತಿದ್ದಾರೆ. ಇದೀಗ ತೆಲುಗಿನ ಜನಪ್ರಿಯ ನಟ ಶ್ರೀವಿಷ್ಣು ಅವರ ಮುಂಬರುವ ಹೊಸ ಸಿನಿಮಾಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಆಯ್ಕೆಯಾಗಿರುವ ಸುದ್ದಿ ಟಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ.

ಸಿತಾರಾ ಎಂಟರ್‌ಟೇನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಹೊಸ ಸಿನಿಮಾದಲ್ಲಿ ಶ್ರೀವಿಷ್ಣು ಮತ್ತು ಆಶಿಕಾ ರಂಗನಾಥ್ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಹೇಗಿರಲಿದೆ ಎಂಬ ಕುತೂಹಲ ಈಗಾಗಲೇ ಅಭಿಮಾನಿಗಳಲ್ಲಿ ಮೂಡಿದೆ. ಯುವ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗುತ್ತಿರುವ ಈ ಸಿನಿಮಾ ಯೂಥ್‌ಫುಲ್ ಎಂಟರ್‌ಟೇನರ್ ಆಗಿರಲಿದೆ ಎನ್ನಲಾಗಿದೆ.

ಶ್ರೀವಿಷ್ಣು ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 2027ರ ಸಂಕ್ರಾಂತಿ ವೇಳೆಗೆ ಅವರ ‘ಕಾಮ್ರೇಡ್ ಕಲ್ಯಾಣ್’ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದರ ನಡುವೆಯೇ ಸಿತಾರಾ ಎಂಟರ್‌ಟೇನ್‌ಮೆಂಟ್ಸ್ ಜೊತೆ ಮತ್ತೊಂದು ಹೊಸ ಪ್ರಾಜೆಕ್ಟ್‌ಗೆ ಅವರು ಕೈಜೋಡಿಸಿದ್ದಾರೆ. ಈ ಸಿನಿಮಾವನ್ನು ಸದ್ಯ ‘ಸಿತಾರಾ ಎಂಟರ್‌ಟೇನ್‌ಮೆಂಟ್ಸ್ ಪ್ರೊಡಕ್ಷನ್ ನಂ. 39’ ಎಂದು ಕರೆಯಲಾಗುತ್ತಿದೆ.

‘ಅನಗನಗ’ ಸಿನಿಮಾದ ಮೂಲಕ ಗಮನ ಸೆಳೆದ ನಿರ್ದೇಶಕ ಸನ್ನಿ ಸಂಜಯ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಇತ್ತೀಚೆಗೆ ಬಿಡುಗಡೆಯಾದ ಗ್ಲಿಂಪ್ಸ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾದ ಕಥೆ, ಪಾತ್ರಗಳು ಮತ್ತು ಮೇಕಿಂಗ್ ಕುರಿತು ಹೆಚ್ಚಿನ ಮಾಹಿತಿ ಚಿತ್ರತಂಡದಿಂದ ಸದ್ಯ ಬಹಿರಂಗವಾಗಿಲ್ಲ.

ಈ ಚಿತ್ರದಲ್ಲಿ ಶ್ರೀವಿಷ್ಣು ಅವರಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಳ್ಳಲಿದ್ದಾರೆ. ‘ಸರ್ದಾರ್ 2’ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರ ಗಮನ ಸೆಳೆದಿದ್ದ ಆಶಿಕಾ, ಇದೀಗ ಮತ್ತೊಂದು ಪ್ರಮುಖ ಪ್ರಾಜೆಕ್ಟ್‌ನಲ್ಲಿ ಅವಕಾಶ ಪಡೆದಿದ್ದಾರೆ. ನಾಯಕಿಯಾಗಿ ಅವರ ಆಯ್ಕೆ ಕುರಿತ ಅಧಿಕೃತ ಘೋಷಣೆಯನ್ನು ಚಿತ್ರತಂಡ ಶೀಘ್ರದಲ್ಲೇ ಮಾಡಲಿದೆ ಎನ್ನಲಾಗಿದೆ.

ನಾಗವಂಶಿ ಅವರು ಈ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದ್ದು, ಹರಿಕಾ ಸೂರ್ಯದೇವರ ಅವರು ಸಿತಾರಾ ಎಂಟರ್‌ಟೇನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಉಳಿದ ಕಲಾವಿದರು, ತಾಂತ್ರಿಕ ವರ್ಗ ಹಾಗೂ ಬಿಡುಗಡೆಗೆ ಸಂಬಂಧಿಸಿದ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವ ಸಾಧ್ಯತೆಯಿದೆ.

ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರುವ ಆಶಿಕಾ ರಂಗನಾಥ್ ಅವರಿಗೆ ಸ್ಟಾರ್ ಹೀರೋಗಳ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಇನ್ನಷ್ಟು ಹೆಚ್ಚಬೇಕು ಎಂಬುದು ಅಭಿಮಾನಿಗಳ ಆಶಯವಾಗಿತ್ತು. ಇದೀಗ ಟಾಲಿವುಡ್ ಮಾತ್ರವಲ್ಲದೆ ಕಾಲಿವುಡ್‌ನಲ್ಲೂ ಅವರಿಗೆ ಉತ್ತಮ ಅವಕಾಶಗಳು ಸಿಗುತ್ತಿರುವುದು ವಿಶೇಷ. ಹೊಸ ಹೊಸ ಪ್ರಾಜೆಕ್ಟ್‌ಗಳ ಮೂಲಕ ಆಶಿಕಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಮತ್ತಷ್ಟು ವಿಸ್ತರಿಸಿಕೊಳ್ಳುವ ನಿರೀಕ್ಷೆಯಿದೆ.

Exit mobile version