ಅಮಿತಾಬ್ ಬಚ್ಚನ್ ನನ್ನ ತಂದೆ !- ರಿದ್ಧಿ ಕುಮಾರ್‌ ಹೀಗೆ ಹೇಳಿದ್ದೇಕೆ..?

Untitled design 2026 01 10T114543.888

ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಹಾರರ್-ಕಾಮಿಡಿ ಚಿತ್ರ ‘ದಿ ರಾಜಾ ಸಾಬ್’ ಈಗ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಚಿತ್ರದ ವಿಎಫ್‌ಎಕ್ಸ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ಇದ್ದರೂ, ಪ್ರಭಾಸ್ ಅವರ ವಿಭಿನ್ನ ಮ್ಯಾನರಿಸಂ ಮತ್ತು ನಾಯಕಿಯರ ಗ್ಲಾಮರ್ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಚಿತ್ರದಲ್ಲಿ ಮಾಳವಿಕಾ ಮೋಹನನ್ ಮತ್ತು ನಿಧಿ ಅಗರ್ವಾಲ್ ಜೊತೆಗೆ ನಟಿ ರಿದ್ಧಿ ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ರಿದ್ಧಿ ಅವರು ಹಂಚಿಕೊಂಡ ಒಂದು ತಮಾಷೆಯ ಪ್ರಸಂಗ ಈಗ ವೈರಲ್ ಆಗಿದೆ.

ನಟಿ ರಿದ್ಧಿ ಕುಮಾರ್ ಈ ಹಿಂದೆ ಪ್ರಭಾಸ್ ನಟನೆಯ ‘ರಾಧೆ ಶ್ಯಾಮ್’ ಚಿತ್ರದಲ್ಲಿ ಪೋಷಕ ಪಾತ್ರವೊಂದನ್ನು ಮಾಡಿದ್ದರು. ಆದರೆ, ‘ದಿ ರಾಜಾ ಸಾಬ್’ ಚಿತ್ರಕ್ಕೆ ನಾಯಕಿಯಾಗಿ ಆಫರ್ ಬಂದಾಗ ಅವರಿಗೆ ನಂಬಲು ಸಾಧ್ಯವಾಗಲಿಲ್ಲವಂತೆ. ಆ ಕ್ಷಣವನ್ನು ನೆನಪಿಸಿಕೊಂಡ ರಿದ್ಧಿ, ನಿರ್ಮಾಪಕರು ಕರೆ ಮಾಡಿ ನೀವು ಪ್ರಭಾಸ್ ಎದುರು ನಾಯಕಿಯಾಗಬೇಕು ಅಂದಾಗ, ನಾನು ಅದನ್ನು ಫೇಕ್ ಕಾಲ್ ಅಥವಾ ಯಾರೋ ತಮಾಷೆ ಮಾಡುತ್ತಿದ್ದಾರೆ ಎಂದುಕೊಂಡೆ. ಅವರು ಮತ್ತೆ ಒತ್ತಾಯಿಸಿ ಹೇಳಿದಾಗ, ನಾನು ಅಷ್ಟೇ ತಮಾಷೆಯಾಗಿ ‘ಹೌದಾ ? ಹಾಗಾದರೆ ಅಮಿತಾಬ್ ಬಚ್ಚನ್ ನನ್ನ ತಂದೆ ಎಂದು ಹೇಳಿ ಫೋನ್ ಇಟ್ಟಿದ್ದೆ ಎಂದು ನಗುತ್ತಾ ತಿಳಿಸಿದ್ದಾರೆ. ನಂತರ ಇದು ನಿಜವಾದ ಸಿನಿಮಾ ಆಫರ್ ಎಂದು ತಿಳಿದಾಗ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲವಂತೆ.

ಪ್ರಭಾಸ್ ಅವರ ಅತಿಥಿ ಸತ್ಕಾರದ ಬಗ್ಗೆ ಚಿತ್ರರಂಗದಲ್ಲಿ ದೊಡ್ಡ ಹೆಸರಿದೆ. ರಿದ್ಧಿ ಕುಮಾರ್ ಕೂಡ ಇದನ್ನೇ ಪುನರುಚ್ಚರಿಸಿದ್ದಾರೆ. ನೀವು ಪ್ರಭಾಸ್ ಜೊತೆ ಸಿನಿಮಾ ಮಾಡುತ್ತಿದ್ದರೆ, ನಿಮ್ಮ ಬ್ಯಾಗ್‌ನಲ್ಲಿ ಒಂದು ‘ಯೋಗ ಮ್ಯಾಟ್’ ಇಟ್ಟುಕೊಳ್ಳುವುದು ಕಡ್ಡಾಯ. ಯಾಕಂದರೆ, ಅವರು ಸೆಟ್‌ಗೆ ತರಿಸುವ ರುಚಿಕರವಾದ ಊಟವನ್ನು ತಿಂದು ನೀವು ತೂಕ ಹೆಚ್ಚಿಸಿಕೊಳ್ಳುವುದು ಖಚಿತ. ಆ ತೂಕ ಇಳಿಸಲು ವ್ಯಾಯಾಮ ಮಾಡಲೇಬೇಕು ಎಂದು ಪ್ರಭಾಸ್ ಅವರ ಗುಣವನ್ನು ಹೊಗಳಿದ್ದಾರೆ. ಸೆಟ್‌ನಲ್ಲಿರುವ ಪ್ರತಿಯೊಬ್ಬರನ್ನು ಪ್ರಭಾಸ್ ತಮ್ಮ ಕುಟುಂಬದ ಸದಸ್ಯರಂತೆ ಕಾಣುತ್ತಾರೆ ಮತ್ತು ಯಾರೂ ಹಸಿವಿನಿಂದ ಇರಬಾರದು ಎಂದು ಕಾಳಜಿ ವಹಿಸುತ್ತಾರೆ ಎಂದು ರಿದ್ದಿ ತಿಳಿಸಿದ್ದಾರೆ.

ಚಿತ್ರದಲ್ಲಿ ರಿದ್ಧಿ ಕುಮಾರ್ ಕೇವಲ ಗ್ಲಾಮರ್‌ಗೆ ಸೀಮಿತವಾಗದೆ, ಕಥೆಗೆ ಪೂರಕವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ಮತ್ತು ರಿದ್ಧಿ ಅವರ ಕೆಮಿಸ್ಟ್ರಿ ಕೂಡ ತೆರೆಯ ಮೇಲೆ ಚೆನ್ನಾಗಿ ಮೂಡಿಬಂದಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಡುತ್ತಿದ್ದಾರೆ.

Exit mobile version