ಹೊಸ ವರ್ಷಕ್ಕೆ ‘ಕ್ಯಾಲೆಂಡರ್’ ಕಡೆಯಿಂದ ಸರ್ಪ್ರೈಸ್: ಟ್ರೆಂಡಿಗ್‌ನಲ್ಲಿ ಆದರ್ಶ ಗುಂಡುರಾಜ್ ಅಭಿನಯದ ‘ನಾನ್ಯಾರು’ ಸಾಂಗ್‌

Untitled design (53)

ಬೆಂಗಳೂರು: ಪ್ರತಿ ವರ್ಷ ಬದಲಾಗುವ ಕ್ಯಾಲೆಂಡರ್‌ನಂತೆ ಮನುಷ್ಯನ ಜೀವನದ ಪುಟಗಳೂ ಬದಲಾಗುತ್ತವೆ. ಇದೇ ಕಲ್ಪನೆಯನ್ನು ಇಟ್ಟುಕೊಂಡು ಸಿದ್ಧವಾಗಿರುವ ಸಿನಿಮಾ ‘ಕ್ಯಾಲೆಂಡರ್’. ಈ ಹಿಂದೆ ‘ಸ್ವಾರ್ಥ ರತ್ನ’ ಸಿನಿಮಾದ ಮೂಲಕ ಗಮನ ಸೆಳೆದಿದ್ದ ನಟ ಆದರ್ಶ ಗುಂಡುರಾಜ್ ಈಗ ‘ಕ್ಯಾಲೆಂಡರ್’ ಎಂಬ ವಿಭಿನ್ನ ಶೀರ್ಷಿಕೆಯ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಚಿತ್ರದ ಮೊದಲ ಹಾಡು ‘ನಾನ್ಯಾರು’ ಇತ್ತೀಚೆಗೆ ಅದ್ದೂರಿಯಾಗಿ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ಪಡೆಯುತ್ತಿದೆ.

ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡ ನಾಯಕ ಹಾಗೂ ನಿರ್ಮಾಪಕ ಆದರ್ಶ ಗುಂಡುರಾಜ್, ಇದು ನಾಯಕನಾಗಿ ನನ್ನ ಮೂರನೇ ಸಿನಿಮಾ. ಪ್ರತಿಯೊಬ್ಬರ ಜೀವನದಲ್ಲಿ ದಿನಾಂಕ ಮತ್ತು ಸಮಯವನ್ನು ಗುರುತಿಸಲು ಕ್ಯಾಲೆಂಡರ್ ಎಷ್ಟು ಮುಖ್ಯವೋ, ಈ ಸಿನಿಮಾದ ಕಥೆಯಲ್ಲೂ ಶೀರ್ಷಿಕೆ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ. ವಿಶೇಷವಾಗಿ ಹೆಣ್ಣುಮಕ್ಕಳಿಗೆ ಈ ಕಥೆ ತುಂಬಾ ಹತ್ತಿರವಾಗಲಿದೆ ಎಂದು ತಿಳಿಸಿದರು. ಈ ಚಿತ್ರಕ್ಕೆ ಸ್ವತಃ ಆದರ್ಶ ಅವರೇ ಕಥೆ ಬರೆದು ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

‘ನಾನ್ಯಾರು’ ಎಂಬ ಈ ಹಾಡಿಗೆ ಸಂಜಯ್ ವೈ ಬಿ ಎಚ್ ಹಾಗೂ ನಿರ್ದೇಶಕ ನವೀನ್ ಶಕ್ತಿ ಸಾಹಿತ್ಯ ಬರೆದಿದ್ದಾರೆ. ವಿಶೇಷವೆಂದರೆ, ಆದರ್ಶ ಗುಂಡುರಾಜ್ ಅವರ ಮಗಳು ಅನುಷ್ಕಾ ಕಾಗಿನೆರೆ ಈ ಹಾಡನ್ನು ಹಾಡುವ ಮೂಲಕ ಗಾಯಕಿಯಾಗಿ ಪಾದಾರ್ಪಣೆ ಮಾಡಿದ್ದಾರೆ. ಇವರಿಗೆ ಹೃತಿಕ್ ಪೂಜಾರಿ ಮತ್ತು ಸಂಜಯ್ ಸಾಥ್ ನೀಡಿದ್ದಾರೆ. ಸುನಾದ್ ಗೌತಮ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡು ಈಗ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದ್ದು, ವೀಕ್ಷಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ರಂಗಭೂಮಿ ಹಿನ್ನೆಲೆಯ ನವೀನ್ ಶಕ್ತಿ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶನದ ಚುಕ್ಕಾಣಿ ಹಿಡಿದಿದ್ದಾರೆ. ಚಿತ್ರದಲ್ಲಿ ಸುಶ್ಮಿತಾ ಹಾಗೂ ನಿವಿಷ್ಕಾ ಪಾಟೀಲ್ ನಾಯಕಿಯರಾಗಿ ನಟಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ‘ಕನಸಿನ ರಾಣಿ’ ಮಾಲಾಶ್ರೀ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ತೂಕವನ್ನು ಹೆಚ್ಚಿಸಿದೆ. ತಾರಾಬಳಗದಲ್ಲಿ ರಮೇಶ್ ಇಂದಿರಾ, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು ಮತ್ತು ಸುಚೇಂದ್ರ ಪ್ರಸಾದ್ ಅವರಂತಹ ಅನುಭವಿ ಕಲಾವಿದರಿದ್ದಾರೆ.

ಈಗಾಗಲೇ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ರಮೇಶ್ ಕೊಯಿರಾ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಇಡೀ ಚಿತ್ರತಂಡ ಮೊದಲ ಹಾಡಿನ ಯಶಸ್ಸಿನ ಖುಷಿಯಲ್ಲಿದ್ದು, ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲು ನಿರ್ಧರಿಸಿದೆ.

Exit mobile version