ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಒಂದು ದೊನ್ನೆ ಬಿರಿಯಾನಿ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಹೊತ್ತಿಕೊಳ್ಳೋಕೆ ಕಾರಣವಾಗಿದೆ. ಲಿಂಗಾಯತರು ಮಾಂಸಹಾರ ಸೇವಿಸ್ತಾರಾ..? ಅನ್ನೋ ಪ್ರಶ್ನೆ ಎತ್ತಿದ್ದಾರೆ ನೆಟ್ಟಿಗರು. ಅದಕ್ಕೆ ಡಾಲಿ ಧನಂಜಯ್ ಹೆಸರು ಟ್ರೆಂಡ್ ಆಗ್ತಿದೆ. ಒಂದು ಕಡೆ ಬಿರಿಯಾನಿ ವಿವಾದ.. ಇನ್ನೊಂದು ಕಡೆ ಗುಡ್ ನ್ಯೂಸ್ ಕೊಟ್ಟಿರೋ ಡಾಲಿ ಧನಂಜಯ್.
ಕೆಂಗೇರಿಯ ಒಂದು ದೊಣ್ಣೆ ಬಿರಿಯಾನಿ ಪ್ಲೇಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡ್ತಿದೆ. ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ್ ಬಿರಿಯಾನಿ ಸವಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಲಿಂಗಾಯತರು ಮಾಂಸಾಹಾರ ಸೇವಿಸ್ತಾರಾ ? ಅನ್ನೋ ಪ್ರಶ್ನೆ ಟ್ರೆಂಡಿಂಗ್ ಆಗಿಬಿಟ್ಟಿದೆ. ಅಪ್ಪುಸ್ ಬಿರಿಯಾನಿ ಹೋಟೆಲ್ ಉದ್ಘಾಟನೆಗೆ ಅತಿಥಿಯಾಗಿ ತೆರಳಿದ್ದ ಧನಂಜಯ್, ಅಲ್ಲಿದ್ದ ಚಿಕನ್-ಮಟನ್ ಬಿರಿಯಾನಿ ರುಚಿ ನೋಡಿದ್ದು ಕೆಲವರಿಗೆ ಹಾಟ್ ಟಾಪಿಕ್ ಆಗಿದೆ.
ಡಾಲಿ ಧನಂಜಯ ದೊನ್ನೆ ಬಿರಿಯಾನಿ ತಿಂದಿದ್ದೇ ತಪ್ಪಾ..?
ಲಿಂಗಾಯತರು ಮಾಂಸಾಹಾರ ಸೇವಿಸ್ತಾರಾ..? ಡಾಲಿಗೆ ಪ್ರಶ್ನೆ
ತಾನು ಲಿಂಗಾಯತ ಎಂದು ವೇದಿಕೆಗಳಲ್ಲಿ ಬಸವಣ್ಣನವರ ವಚನಗಳನ್ನು ಹೇಳುವ ಧನಂಜಯ್ ನಾನ್-ವೆಜ್ ತಿಂತಾರಾ? ಎಂದು ಕೆಲವರು ಪ್ರಶ್ನೆ ಎತ್ತಿದ್ದಾರೆ. ಆದರೆ ಇನ್ನೊಂದು ವಲಯ ತೀವ್ರವಾಗಿ ಪ್ರತಿಕ್ರಿಯಿಸಿ ಊಟ ಅವರಿಷ್ಟ, ಜಾತಿ-ಧರ್ಮ ಎಳೆದು ತರುವುದೇಕೆ ? ಎಂದು ಕಿಡಿಕಾರುತ್ತಿದೆ. ಮೂರು ವರ್ಷಗಳ ಹಿಂದೆ ಸಹಕಾರನಗರದ ದೊಣ್ಣೆ ಬಿರಿಯಾನಿ ಹೋಟೆಲ್‌ನಲ್ಲಿ ಸಂದರ್ಶನ ವೇಳೆ ಕೂಡ ಧನಂಜಯ್ ಮಾಂಸಾಹಾರ ಸವಿದಿದ್ದರು. ಆಗಲೇ ನಾನು ಸಸ್ಯಾಹಾರ, ಮಾಂಸಾಹಾರ ಎರಡೂ ತಿನ್ನುತ್ತೇನೆ. ಮೈಸೂರಿಗೆ ಹೋದರೆ ಬೆಳಗ್ಗೆ ತಟ್ಟೆ ಇಡ್ಲಿ, ಮಧ್ಯಾಹ್ನ ಬಿರಿಯಾನಿ… ಎಲ್ಲ ಸವಿಯುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದರು. ಹಾಗಿದ್ದರೂ ಈಗ ಈ ವಿಡಿಯೋ ಮತ್ತೆ ಚರ್ಚೆಗೆ ಕಾರಣವಾಗಿದೆ.
ಸದ್ಯ ಅಭಿಮಾನಿಗಳು ಕೂಡ ಧನಂಜಯ್ ಬೆಂಬಲಕ್ಕೆ ನಿಂತಿದ್ದಾರೆ. ಶಂಕರ್ ನಾಗ್, ವಿಷ್ಣುವರ್ಧನ್ ಕೂಡ ಮಾಂಸಾಹಾರ ಸೇವಿಸುತ್ತಿದ್ದರು. ಆಗ ಯಾಕೆ ಪ್ರಶ್ನೆ ಕೇಳಲಿಲ್ಲ? ಎಂದು ಪ್ರಶ್ನಿಸುತ್ತಿದ್ದಾರೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಹಸಿದವರಿಗೆ ಬಿರಿಯಾನಿ ಹಂಚಿದ ಧನಂಜಯ್ ಬಗ್ಗೆ ಈಗ ಇಂತಹ ವಿವಾದ ಹುಟ್ಟಿರುವುದು ಅನಗತ್ಯ ಎಂದೂ ಅಭಿಮಾನಿಗಳ ಅಸಮಾಧಾನ ತೋರಿದ್ದಾರೆ.
ಒಂದು ಪ್ಲೇಟ್ ಬಿರಿಯಾನಿ.. ಪರ-ವಿರೋಧ ಕಮೆಂಟ್ ವಾರ್
ಫ್ಯಾನ್ಸ್‌ಗೆ ಡಬಲ್ ಸರ್‌ಪ್ರೈಸ್.. ಡಾಲಿ ಆಗ್ತಿದ್ದಾರೆ ಡ್ಯಾಡಿ..!!
ಈ ಚರ್ಚೆಯ ಮಧ್ಯೆ ಡಾಲಿ ಧನಂಜಯ್ ಇನ್ನೊಂದು ಗುಡ್ ನ್ಯೂಸ್ ಕೊಟ್ಟು ಎಲ್ಲರ ಗಮನ ಸೆಳೆದಿದ್ದಾರೆ. ಉದಯ ಕನ್ನಡಿಗ 2025 ಕಾರ್ಯಕ್ರಮದಲ್ಲಿ ಎರಡು ಗುಲಾಬಿ ಹೂ ಸ್ವೀಕರಿಸಿದ ಡಾಲಿ, ಒಂದನ್ನು ಮನೆಗೆ ತೆಗೆದುಕೊಂಡು ಹೋಗಿ ನನ್ನ ಹೆಂಡತಿಗೆ ಕೊಡ್ತೀನಿ, ಸದ್ಯದಲ್ಲೇ ಇನ್ನೊಂದು ಜೀವ ಜೊತೆಯಾಗ್ತಿದೆ, ಅದಕ್ಕೆ ಕೊಡ್ತೀನಿ ಎಂದು ಹೇಳಿ ತಂದೆಯಾಗುತ್ತಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಕಳೆದ ವರ್ಷ ಫೆಬ್ರವರಿಯಲ್ಲಿ ಧನ್ಯತಾ ಜೊತೆ ಮದುವೆಯಾದ ಡಾಲಿ, ಒಂದು ವರ್ಷದೊಳಗೆ ಫ್ಯಾನ್ಸ್‌ಗೆ ಡಬಲ್ ಸರ್ಪ್ರೈಸ್ ನೀಡಿದ್ದಾರೆ.
ಒಂದು ಕಡೆ ಬಿರಿಯಾನಿ ವಿವಾದ ಇನ್ನೊಂದು ಕಡೆ ತಂದೆಯಾಗುತ್ತಿರುವ ಸಂಭ್ರಮ. ಇದರ ನಡುವೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಡಾಲಿ ಧನಂಜಯ್ ಉತ್ತರಕಾಂಡ, ಜಿಂಗೊ, ಅಣ್ಣ ಫ್ರಮ್ ಮೆಕ್ಸಿಕೊ, ಹಲಗಲಿ, 666 ಆಪರೇಷನ್ ಡ್ರೀಮ್ ಥಿಯೇಟರ್ ಹೀಗೆ ಹಲವು ಪ್ರಾಜೆಕ್ಟ್‌ಗಳಲ್ಲಿ ನಟಿಸುತ್ತಿದ್ದಾರೆ. ನಿರ್ಮಾಪಕರಾಗಿಯೂ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿದ್ದಾರೆ. ಒಟ್ಟಾರೆ, ಒಂದು ಪ್ಲೇಟ್ ಬಿರಿಯಾನಿಯಿಂದ ಶುರುವಾದ ಚರ್ಚೆ, ಈಗ ಡಾಲಿಯ ವೈಯಕ್ತಿಕ ಆಯ್ಕೆ, ಧರ್ಮ, ಹಾಗೂ ಹೊಸ ಜೀವನದ ಸಂಭ್ರಮವರೆಗೆ ತಲುಪಿದೆ. ವಿವಾದ ಎಷ್ಟೇ ಇರಲಿ, ಡಾಲಿ ಸ್ಟೈಲ್‌ನಲ್ಲಿ ಬದುಕೋದು ಮಾತ್ರ ಫುಲ್ ಡಿಫರೆಂಟ್.
