ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕಿರಿ ಮಗಳಿಗೆ ಕಂಕಣಭಾಗ್ಯ

14 ವರ್ಷಗಳ ಸುದೀರ್ಘ ಪ್ರೀತಿ.. ಒಂದಾದ ಅಂಜನಾ & ಇಸೈ

Your paragraph text (85)

ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮನೆಯಲ್ಲಿ ಈಗ ಶುಭಕಾರ್ಯದ ಸಂಭ್ರಮ. ಯೆಸ್.. ಬರೋಬ್ಬರಿ 14 ವರ್ಷಗಳ ರಹಸ್ಯ ಪ್ರೀತಿಗೆ ಕೊನೆಗೂ ಸಿಕ್ಕಿದೆ ಅಧಿಕೃತ ಮುದ್ರೆ. ಇಟಲಿಯ ಲೇಕ್ ಕೊಮೋದಲ್ಲಿ ರಿಂಗ್ ತೊಟ್ಟಿದ್ದ ಲವ್ ಬರ್ಡ್ಸ್ ಅಂಜನಾ ಮತ್ತು ಇಸೈ.. ಇದೀಗ ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ಒಂದಾಗಿದ್ದಾರೆ.

ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕಿರಿ ಮಗಳಿಗೆ ಕಂಕಣಭಾಗ್ಯ

14 ವರ್ಷಗಳ ಸುದೀರ್ಘ ಪ್ರೀತಿ.. ಒಂದಾದ ಅಂಜನಾ & ಇಸೈ

 ಇಟಲಿಯ ಲೇಕ್ ಕೊಮೋದಲ್ಲಿ ಎಂಗೇಜ್ ಆಗಿದ್ದ ಜೋಡಿ

ಹಿಂದೂ ಸಂಪ್ರದಾಯದ ಜೊತೆ ಅದ್ಧೂರಿ ಚರ್ಚ್ ವೆಡ್ಡಿಂಗ್..!

ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮನೆಯಲ್ಲಿ ಮದುವೆಯ ಸಂಭ್ರಮದ ಕಲರವ ಮುಗಿಲು ಮುಟ್ಟಿದೆ. ಅರ್ಜುನ್ ಸರ್ಜಾ ಅವರ ಕಿರಿಯ ಮುದ್ದು ಮಗಳು ಅಂಜನಾ ಅರ್ಜುನ್, ತಮ್ಮ ಸುದೀರ್ಘ 14 ವರ್ಷಗಳ ವಿದೇಶಿ ಪ್ರಿಯಕರ, ಯಶಸ್ವಿ ಉದ್ಯಮಿ ಇಸೈ ಜೊತೆ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ವರ್ಷ ಇಟಲಿಯ ಅತ್ಯಂತ ಸುಂದರ ತಾಣ ಲೇಕ್ ಕೊಮೊದಲ್ಲಿ ಉಂಗುರ ವಿನಿಮಯ ಮಾಡಿಕೊಂಡಿದ್ದ ಈ ಜೋಡಿ, ಇದೀಗ ಎರಡೂ ಕುಟುಂಬಗಳ ಸಂಪೂರ್ಣ ಸಮ್ಮತಿಯೊಂದಿಗೆ ಅಧಿಕೃತವಾಗಿ ಒಂದಾಗಿದೆ. ಅಂಜನಾ ಅವರು ಸೋಶಿಯಲ್ ಮೀಡಿಯಾದಲ್ಲಿ “To forever #14yearslater” ಎಂದು ಬರೆದುಕೊಂಡು ತಮ್ಮ ಮದುವೆಯ ಡ್ರೀಮಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆ, ನೆಟ್ಟಿಗರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದು, ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿದೆ.

ವಿದೇಶಿ ಯುವಕನಾಗಿದ್ದರೂ ಇಸೈ ಅವರು ಭಾರತೀಯ ಸಂಸ್ಕೃತಿಗೆ ಕೊಟ್ಟ ಗೌರವ ಮಾತ್ರ ನೆಟ್ಟಿಗರ ಮನ ಗೆದ್ದಿದೆ. ಅಕ್ಟೋಬರ್ 19 ರಂದು ಬಂಧು-ಮಿತ್ರರ ಸಮ್ಮುಖದಲ್ಲಿ ಭಾರತೀಯ ಹಾಗೂ ಹಿಂದೂ ಸಾಂಪ್ರದಾಯಿಕ ಶೈಲಿಯಲ್ಲಿ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದ ನವಜೋಡಿ, ಕನಸಿನ ಲೋಕದಂತಿದ್ದ ಮಂಟಪದಲ್ಲಿ ಕಂಗೊಳಿಸಿದರು. ಬರಿ ಹಿಂದೂ ಆಚಾರ-ವಿಚಾರ ಅಷ್ಟೇ ಅಲ್ಲ, ಇದರ ಬೆನ್ನಲ್ಲೇ ಈ ಜೋಡಿ ರೊಮ್ಯಾಂಟಿಕ್ ಶೈಲಿಯ ಕ್ರಿಶ್ಚಿಯನ್ ಚರ್ಚ್ ವೆಡ್ಡಿಂಗ್ ಕೂಡ ಮಾಡಿಕೊಂಡು ಜಾಗತಿಕ ಮತ್ತು ಸಾಂಪ್ರದಾಯಿಕ ಸಂಸ್ಕೃತಿಗಳ ಅದ್ಭುತ ಸಂಗಮಕ್ಕೆ ಸಾಕ್ಷಿಯಾದರು. ಸಾಂಪ್ರದಾಯಿಕ ರೇಷ್ಮೆ ಉಡುಗೆಯಿಂದ ಹಿಡಿದು ಕ್ರಿಶ್ಚಿಯನ್ ವೆಡ್ಡಿಂಗ್ ಗೌನ್‌ವರೆಗೆ ಅಂಜನಾ ದೇವತೆಯಂತೆ ಮಿಂಚಿದ್ದರೆ, ವಿದೇಶಿ ಗಂಡು ಇಸೈ ಭಾರತೀಯ ವರನಾಗಿ ದೇಶಿ ಲುಕ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.

ಅರ್ಜುನ್ ಸರ್ಜಾ ಅವರ ಹಿರಿಯ ಮಗಳು ಐಶ್ವರ್ಯಾ ಅರ್ಜುನ್ ಬೆಳ್ಳಿಪರದೆ ಮೇಲೆ ನಟಿಯಾಗಿ ಮಿಂಚುತ್ತಿದ್ದರೆ, ಕಿರಿಯ ಮಗಳು ಅಂಜನಾ ಮಾತ್ರ ಸಿನಿಮಾ ಗ್ಲಾಮರ್‌ಗಿಂತ ದೂರ ಉಳಿದು ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ. ತಮಗೊಪ್ಪುವ ಯಶಸ್ವಿ ಉದ್ಯಮಿ ಇಸೈ ಅವರನ್ನೇ ಕೈಹಿಡಿದು, 14 ವರ್ಷಗಳ ಪ್ರೇಮಕಥೆಗೆ ಈಗ ಸಫಲತೆಯ ಮುದ್ರೆ ಒತ್ತಿದ್ದಾರೆ. ಈ ಅದ್ಧೂರಿ ಮದುವೆಯ ಫೋಟೋಗಳು ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ಹಲ್‌ಚಲ್ ಎಬ್ಬಿಸಿದ್ದು, ಆಕ್ಷನ್ ಕಿಂಗ್ ಗರಡಿಯ ಈ ಹೊಸ ಜೋಡಿಗೆ ಇಡೀ ದಕ್ಷಿಣ ಭಾರತೀಯ ಚಿತ್ರರಂಗ ಹಾಗೂ ಅಭಿಮಾನಿಗಳು ಸುಖೀ ದಾಂಪತ್ಯದ ಹಾರೈಕೆಗಳನ್ನು ತಿಳಿಸುತ್ತಿದ್ದಾರೆ.

ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version