ಬೆಂಗಳೂರು: ಇಂದಿನಿಂದ ಮೂರು ದಿನಗಳ ಕಾಲ ನಡೆಯಬೇಕಿದ್ದ ಬ್ಯಾಂಕ್ ಮುಷ್ಕರವನ್ನು ಮುಂದೂಡಲಾಗಿದೆ. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಕರೆ ನೀಡಿದ್ದ ಮುಷ್ಕರವನ್ನು ಹಿಂಪಡೆಯಲಾಗಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ದೇಶದಾದ್ಯಂತ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಮುಂದುವರಿಯಲಿವೆ.
ಬ್ಯಾಂಕ್ ಮುಷ್ಕರ ಮುಂದೂಡಿಕೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಹಕರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಎಲ್ಲಾ ಬ್ಯಾಂಕ್ ಶಾಖೆಗಳು ಎಂದಿನಂತೆ ತೆರೆದಿರಲಿದ್ದು, ಹಣ ಠೇವಣಿ, ಹಣ ಹಿಂಪಡೆಯುವುದು, ಚೆಕ್ ವಹಿವಾಟು ಸೇರಿದಂತೆ ಸಾಮಾನ್ಯ ಬ್ಯಾಂಕಿಂಗ್ ಸೇವೆಗಳು ಲಭ್ಯವಿರಲಿವೆ. ಆನ್‌ಲೈನ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಎಟಿಎಂ ಸೇವೆಗಳ ಮೇಲೂ ಮುಷ್ಕರದ ಪರಿಣಾಮ ಇರುವುದಿಲ್ಲ ಎಂದು SBI ಪ್ರಕಟಣೆಯಲ್ಲಿ ತಿಳಿಸಿದೆ.
ಭಾನುವಾರ (ಸೆ.27) ರಾತ್ರಿ ಭಾರತೀಯ ಬ್ಯಾಂಕ್‌ಗಳ ಸಂಘ (IBA) ಹಾಗೂ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಪ್ರತಿನಿಧಿಗಳ ನಡುವೆ ನಡೆದ ಸಭೆಯ ಬಳಿಕ ಮುಷ್ಕರವನ್ನು ಮುಂದೂಡುವ ನಿರ್ಧಾರ ಕೈಗೊಳ್ಳಲಾಗಿದೆ. ಬ್ಯಾಂಕ್ ನೌಕರರ ವಿವಿಧ ಬೇಡಿಕೆಗಳ ಕುರಿತು ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದ್ದು, ಕೆಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಲಾಗಿದೆ.
ಎಲ್ಲಾ ಶನಿವಾರ ರಜೆ ಕುರಿತು ಸಮಿತಿ
ಬ್ಯಾಂಕ್ ನೌಕರರ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ತಿಂಗಳ ಎಲ್ಲಾ ಶನಿವಾರಗಳನ್ನು ರಜಾದಿನಗಳಾಗಿ ಘೋಷಿಸುವ ಕುರಿತು ಚರ್ಚಿಸಲು ಉನ್ನತ ಮಟ್ಟದ ಸಮಿತಿಯನ್ನು ತಕ್ಷಣವೇ ರಚಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ಈ ಕುರಿತು ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವ ಬಗ್ಗೆ ಸಮಿತಿ ಚರ್ಚಿಸಲಿದೆ.
PLI ಬದಲಾವಣೆ ಕುರಿತು ಮಾತುಕತೆ
ಸ್ಕೇಲ್ IV ಮತ್ತು ಅದಕ್ಕಿಂತ ಮೇಲಿನ ಹಂತದ ಅಧಿಕಾರಿಗಳಿಗೆ ಸಂಬಂಧಿಸಿದ ಪರ್ಫಾರ್ಮೆನ್ಸ್ ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆಯಲ್ಲಿನ ಬದಲಾವಣೆಗಳ ಬಗ್ಗೆಯೂ IBA ಜತೆ ಮಾತುಕತೆ ಆರಂಭಿಸಲು ನಿರ್ಧರಿಸಲಾಗಿದೆ. ಅಧಿಕಾರಿಗಳ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು, ಸೂಕ್ತ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಭರವಸೆ ನೀಡಲಾಗಿದೆ.
ಇದರ ಜೊತೆಗೆ, 2024ರ ಮಾರ್ಚ್ 8ರಂದು ನಡೆದ ಸಭೆಯಲ್ಲಿ ಚರ್ಚಿಸಲಾದ ಇತ್ತೀಚಿನ ಬಾಕಿ ಉಳಿದಿರುವ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವುದಾಗಿ IBA ತಿಳಿಸಿದೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ UFBU ತನ್ನ ಮೂರು ದಿನಗಳ ಬ್ಯಾಂಕ್ ಮುಷ್ಕರದ ಕರೆಯನ್ನು ಹಿಂಪಡೆದುಕೊಂಡಿದೆ. ಹೀಗಾಗಿ ಇಂದಿನಿಂದ ಬ್ಯಾಂಕ್ ಸೇವೆಗಳಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ. SBI ಸೇರಿದಂತೆ ಬ್ಯಾಂಕ್ ಶಾಖೆಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಗ್ರಾಹಕರು ತಮ್ಮ ಸಾಮಾನ್ಯ ಬ್ಯಾಂಕಿಂಗ್ ವ್ಯವಹಾರಗಳನ್ನು ಯಾವುದೇ ಅಡಚಣೆಯಿಲ್ಲದೆ ನಡೆಸಬಹುದಾಗಿದೆ.
