ದೆಹಲಿ (ಜುಲೈ 8): ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ರಾಹಕಪರ ಮಹತ್ವದ ಬದಲಾವಣೆಯನ್ನು ಜಾರಿಗೆ ತಂದಿದ್ದು, ಕಡ್ಡಾಯ ಎಸ್‌ಎಂಎಸ್ ಅಲರ್ಟ್‌ಗಳಿಗೆ ಗ್ರಾಹಕರಿಂದ ಶುಲ್ಕ ವಸೂಲಿ ಮಾಡುವ ಪದ್ಧತಿಗೆ ಬ್ರೇಕ್ ಹಾಕಿದೆ. ಈ ಹೊಸ ನಿಯಮದಿಂದ ಗ್ರಾಹಕರಿಗೆ ನೇರ ಲಾಭವಾಗಲಿದ್ದು, ಮತ್ತೊಂದೆಡೆ ಬ್ಯಾಂಕುಗಳ ಸೇವಾ ಶುಲ್ಕದ ಆದಾಯಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ. ಬ್ಯಾಂಕಿಂಗ್ ವಲಯದ ಅಂದಾಜಿನ ಪ್ರಕಾರ, ಈ ನಿರ್ಧಾರದಿಂದ ಪ್ರಮುಖ ಬ್ಯಾಂಕುಗಳ ಒಟ್ಟು ವಾರ್ಷಿಕ ಸೇವಾ ಶುಲ್ಕದ ಆದಾಯದಲ್ಲಿ (fee income) ಸುಮಾರು ₹300 ಕೋಟಿ ಮಟ್ಟದ ಪರಿಣಾಮ ಉಂಟಾಗಬಹುದು ಎನ್ನಲಾಗಿದೆ.
ಇಲ್ಲಿಯವರೆಗೆ ಅನೇಕ ಬ್ಯಾಂಕುಗಳು ಗ್ರಾಹಕರಿಗೆ ಕಳುಹಿಸುವ SMS ಅಲರ್ಟ್‌ಗಳಿಗಾಗಿ ಪ್ರತಿ ತ್ರೈಮಾಸಿಕಕ್ಕೆ ₹15ರಿಂದ ₹18ರವರೆಗೆ ಶುಲ್ಕ ವಸೂಲಿ ಮಾಡುತ್ತಿದ್ದವು. ಆದರೆ RBI ಜೂನ್ 24ರಂದು ಹೊರಡಿಸಿದ ತಿದ್ದುಪಡಿ ನಿರ್ದೇಶನದ ಪ್ರಕಾರ, ನಿಯಂತ್ರಣ ಪಾಲನೆ, ಗ್ರಾಹಕ ಜಾಗೃತಿ ಮತ್ತು ಕೆಲವು ಪ್ರಚಾರಾತ್ಮಕ ಉದ್ದೇಶಗಳಿಗೆ ಕಳುಹಿಸುವ SMSಗಳಿಗೆ ಬ್ಯಾಂಕುಗಳು ಗ್ರಾಹಕರಿಂದ ಯಾವುದೇ ರೀತಿಯ ಶುಲ್ಕವನ್ನು ಪಡೆಯಬಾರದು. ಇದೇ ವೇಳೆ, ₹500ಕ್ಕಿಂತ ಹೆಚ್ಚಿನ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವ್ಯವಹಾರಗಳಿಗೆ ತಕ್ಷಣದ SMS ಅಲರ್ಟ್ ಕಳುಹಿಸುವ ವ್ಯವಸ್ಥೆಯನ್ನೂ ಭಾರತೀಯ ರಿಸರ್ವ್ ಬ್ಯಾಂಕ್ (RBI) ಒತ್ತಿಹೇಳಿದೆ.
ಬ್ಯಾಂಕುಗಳಿಗೆ ಸಣ್ಣ ಮಟ್ಟಿನ ರಿಲೀಫ್ ನೀಡುವಂತೆ, ₹500 ಅಥವಾ ಅದಕ್ಕಿಂತ ಕಡಿಮೆ ಮೌಲ್ಯದ ಮೈಕ್ರೋ ಟ್ರಾನ್ಸಾಕ್ಷನ್‌ಗಳಿಗೆ SMS ಅಲರ್ಟ್ ಕಳುಹಿಸುವುದನ್ನು ಕಡ್ಡಾಯವಲ್ಲ, ಐಚ್ಛಿಕವಾಗಿ (Optional) ಮಾಡಲಾಗಿದೆ. ಭಾರತದಲ್ಲಿ ಇಂತಹ ಸಣ್ಣ ವ್ಯವಹಾರಗಳ ಸಂಖ್ಯೆ ಬಹಳ ಹೆಚ್ಚಿನದಾಗಿರುವುದರಿಂದ, ಈ ವಿನಾಯಿತಿಯಿಂದ ಬ್ಯಾಂಕುಗಳಿಗೆ SMS ವೆಚ್ಚದಲ್ಲಿ ಕೆಲವು ಮಟ್ಟದ ಉಳಿತಾಯವಾಗಬಹುದು. ಆದರೆ ಗ್ರಾಹಕ ಸೇವೆ ಮತ್ತು ವಂಚನೆ ತಡೆಗಟ್ಟುವ ದೃಷ್ಟಿಯಿಂದ ದೊಡ್ಡ ಖಾಸಗಿ ಬ್ಯಾಂಕುಗಳು ಇಂತಹ ಅಲರ್ಟ್‌ಗಳನ್ನು ಮುಂದುವರಿಸುವ ಸಾಧ್ಯತೆಯೂ ಇದೆ.
ಈ ಹೊಸ ನಿಯಮದ ಪರಿಣಾಮವಾಗಿ ಎಚ್‌ಡಿಎಫ್‌ಸಿ (HDFC), ಐಸಿಐಸಿಐ (ICICI), ಆಕ್ಸಿಸ್ (Axis) ಮತ್ತು ಕೊಟಕ್ ಮಹೀಂದ್ರಾ (Kotak Mahindra) ಮುಂತಾದ ಪ್ರಮುಖ ಬ್ಯಾಂಕುಗಳು ತಮ್ಮ ಅಲರ್ಟ್ ವ್ಯವಸ್ಥೆಯನ್ನು ಮರುಪರಿಶೀಲಿಸುವ ಹಾದಿಯಲ್ಲಿವೆ. ಸಾಂಪ್ರದಾಯಿಕ SMSಗಳ ಬದಲಿಗೆ ಮೊಬೈಲ್ ಆಪ್ ಪುಶ್ ನೋಟಿಫಿಕೇಶನ್‌ಗಳು (push notifications), ಇಮೇಲ್ (email), ವಾಟ್ಸಾಪ್ ಸಂದೇಶ (WhatsApp messages) ಮತ್ತು ಗೂಗಲ್ ಆರ್‌ಸಿಎಸ್ (RCS)ಮಾದರಿಯ ಡಿಜಿಟಲ್ ಚಾನೆಲ್‌ಗಳ ಬಳಕೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕೆಲ ಬ್ಯಾಂಕುಗಳು ಈ ವೆಚ್ಚವನ್ನು ಬೇರೆ ಶುಲ್ಕ ಮಾದರಿಗಳಲ್ಲಿ ಒಳಗೊಳ್ಳುವ ಪ್ರಯತ್ನ ಮಾಡಬಹುದು ಎಂಬ ಹೇಳಲಾಗುತ್ತಿದೆ.
ಇನ್ನೊಂದೆಡೆ, ಬ್ಯಾಂಕುಗಳು SMS ಬಳಕೆಯನ್ನು ಕಡಿಮೆ ಮಾಡಿದರೆ ಟೆಲಿಕಾಂ ಕಂಪನಿಗಳ ವಾಣಿಜ್ಯ SMS ಟ್ರಾಫಿಕ್ ಮೇಲೂ ಪರಿಣಾಮ ಬೀಳಬಹುದು. RBIಯ ಈ ಕ್ರಮ ಗ್ರಾಹಕರಿಗೆ ರಿಲೀಫ್ ನೀಡುವ ಗ್ರಾಹಕಪರ ನಿರ್ಧಾರವಾಗಿದ್ದು, ಬ್ಯಾಂಕುಗಳು ಈಗ ಕಡಿಮೆ ವೆಚ್ಚದಲ್ಲಿ ಹೆಚ್ಚು ಪರಿಣಾಮಕಾರಿ ಡಿಜಿಟಲ್ ಅಲರ್ಟ್ ವ್ಯವಸ್ಥೆ ನಿರ್ಮಿಸುವ ಸವಾಲನ್ನು ಎದುರಿಸಬೇಕಾಗಿದೆ.
