ಭಾರತದಲ್ಲಿ ಇಳಿಯುತ್ತಾ ಪೆಟ್ರೋಲ್-ಡೀಸೆಲ್ ಬೆಲೆ?: ವಾಹನ ಸವಾರರಿಗೆ ಸಿಗುತ್ತಾ ಗುಡ್ ನ್ಯೂಸ್?

Untitled design 2026 06 27T224444.432

ನವದೆಹಲಿ: ಆರ್ಥಿಕವಾಗಿ ಸದೃಢವಾಗಿ ಬೆಳೆಯುತ್ತಿರುವ ಭಾರತ ದೇಶದಲ್ಲಿ ಸದ್ಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮಾತ್ರ ಗಗನಕ್ಕೇರಿದೆ. ಪ್ರಮುಖ ನಗರಗಳಲ್ಲಿ ಲೀಟರ್‌ಗೆ ₹110 ರಿಂದ ₹116 ರ ಆಸುಪಾಸಿನಲ್ಲಿ ದರಗಳಿದ್ದು, ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಆದರೆ, ಇದೀಗ ಭಾರತೀಯ ವಾಹನ ಸವಾರರಿಗೆ ಶೀಘ್ರದಲ್ಲೇ ಭರ್ಜರಿ ಸಿಹಿ ಸುದ್ದಿ ಸಿಗುವ ಸಾಧ್ಯತೆಗಳು ದಟ್ಟವಾಗಿವೆ.

ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನ ಮಾಲೀಕರಿಗೆ ಖುಷಿ ಸುದ್ದಿ ಸಿಗುವ ಕಾಲ ಹತ್ತಿರವಾಗಿದೆ. ಹೌದು, ಭಾರತದಲ್ಲಿ ಶೀಘ್ರವಾಗಿ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆಯಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ವಾಹನ ಪ್ರಿಯರಲ್ಲಿ ಆಶಾಭಾವನೆ ಮೂಡಿಸಿದೆ.

ತಕ್ಷಣಕ್ಕೇನೂ ಇಳಿಯಲ್ಲ ಇಂಧನ ದರ; ಕಾರಣವೇನು?

ಇರಾನ್ ಹಾಗೂ ಅಮೆರಿಕ ನಡುವಿನ ಉದ್ವಿಗ್ನತೆ ಮತ್ತು ಮಧ್ಯಪ್ರಾಚ್ಯದ ಯುದ್ಧದ ವಾತಾವರಣದ ಬಳಿಕ ಭಾರತ ಮಾತ್ರವಲ್ಲದೆ ಇಡೀ ಏಷ್ಯಾ ಖಂಡದಲ್ಲಿಯೇ ಇಂಧನ ದರ ಇನ್ನಿಲ್ಲದಂತೆ ಏರಿಕೆ ಕಂಡಿತ್ತು. ಭಾರತದಲ್ಲಿ ಒಂದೇ ಬಾರಿಗೆ ಲೀಟರ್‌ಗೆ ₹10 ರವರೆಗೆ ದರ ಏರಿಕೆಯಾಗಿದ್ದು ಗ್ರಾಹಕರಲ್ಲಿ ಆತಂಕ ಹೆಚ್ಚಿಸಿತ್ತು. ಈ ಭಾರಿ ಬೆಲೆ ಏರಿಕೆಗೆ ದೇಶಾದ್ಯಂತ ವ್ಯಾಪಕ ವಿರೋಧವೂ ವ್ಯಕ್ತವಾಗಿತ್ತು.

ಆದರೆ ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಸತತವಾಗಿ ಇಳಿಕೆಯಾಗುತ್ತಿದೆ. ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಕೂಡ ಇತ್ತೀಚೆಗೆ ಪ್ರತಿಕ್ರಿಯಿಸಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಸ್ಥಿರವಾದರೆ ಭಾರತದಲ್ಲೂ ಅತಿ ಶೀಘ್ರದಲ್ಲಿ ಪೆಟ್ರೋಲ್-ಡೀಸೆಲ್ ದರ ಇಳಿಕೆಯಾಗುವ ಮುನ್ಸೂಚನೆ ನೀಡಿದ್ದಾರೆ. ತೈಲ ಕಂಪನಿಗಳು ತಮ್ಮ ಹಳೆಯ ನಷ್ಟವನ್ನು ಭರ್ತಿ ಮಾಡಿಕೊಂಡ ತಕ್ಷಣವೇ ದರ ಕಡಿತದ ಲಾಭ ಗ್ರಾಹಕರಿಗೆ ಸಿಗಲಿದೆ.

ಭಾರತ-ರಷ್ಯಾ ತೈಲ ಮೈತ್ರಿ ಮತ್ತಷ್ಟು ಬಲ ಮಧ್ಯಪ್ರಾಚ್ಯದ ಬಿಕ್ಕಟ್ಟಿನ ನಡುವೆಯೂ ಭಾರತ ಮತ್ತು ರಷ್ಯಾ ನಡುವಿನ ತೈಲ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ರಷ್ಯಾ ನೀಡುತ್ತಿರುವ ರಿಯಾಯಿತಿ ದರದ ಕಚ್ಚಾ ತೈಲದ (Discounted Crude Oil) ಆಫರ್ ಅನ್ನು ಭಾರತ ಅತ್ಯುತ್ತಮವಾಗಿ ಬಳಸಿಕೊಳ್ಳುತ್ತಿದೆ. ರಷ್ಯಾದಿಂದ ಬೃಹತ್ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಭಾರತ, ಅದನ್ನು ತನ್ನ ಅತ್ಯಾಧುನಿಕ ರಿಫೈನರಿಗಳಲ್ಲಿ ಶುದ್ಧೀಕರಿಸುತ್ತಿದೆ. ಇದು ಭಾರತದ ಆರ್ಥಿಕತೆಗೆ ದೊಡ್ಡ ಬಲ ತಂದಿಟ್ಟಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಣಕ್ಕೆ ಸಹಕಾರಿಯಾಗುತ್ತಿದೆ.

ಭಾರತದಲ್ಲೇ ಸಿಗುತ್ತಾ ಕಚ್ಚಾ ತೈಲ?

ಕೆಲವು ದಿನಗಳ ಹಿಂದೆ ಭಾರತದ ಪ್ರಮುಖ ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ಮತ್ತು ನಿಕೋಬಾರ್‌ನ ಸಮುದ್ರ ತೀರದಲ್ಲಿ ಒಎನ್ಜಿಸಿ (ONGC) ಸಂಸ್ಥೆ ಮೊದಲ ಬಾರಿಗೆ ಬೃಹತ್ ತೈಲ ನಿಕ್ಷೇಪವನ್ನು ಪತ್ತೆಹಚ್ಚಿ ಇತಿಹಾಸ ನಿರ್ಮಿಸಿತ್ತು. ಅಂದಿನಿಂದಲೂ ಭಾರತದಲ್ಲೇ ದೇಶೀಯ ತೈಲ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ತೈಲ ಘಟಕಗಳನ್ನು ಸ್ಥಾಪಿಸುವ ಚರ್ಚೆಗಳು ನಡೆಯುತ್ತಿವೆ. ಒಂದು ವೇಳೆ ಅಂಡಮಾನ್ನಲ್ಲಿ ವಾಣಿಜ್ಯ ಮಟ್ಟದ ಉತ್ಪಾದನೆ ಯಶಸ್ವಿಯಾದರೆ, ತೈಲಕ್ಕಾಗಿ ಬೇರೆ ದೇಶಗಳ ಮೇಲಿನ ಭಾರತದ ಅವಲಂಬನೆ ಗಣನೀಯವಾಗಿ ಕಡಿಮೆಯಾಗಲಿದೆ. ಇದು ಭಾರತೀಯರ ಪಾಲಿಗೆ ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ.

Exit mobile version