ನವದೆಹಲಿ ಅ.05: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ಇಂಡಿಗೋ (IndiGo), ವಿಮಾನ ಇಂಧನದ (ATF) ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಮತ್ತೊಂದು ಶಾಕ್ ನೀಡಿದೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಟಿಕೆಟ್‌ಗಳ ಮೇಲಿನ ಇಂಧನ ಸರ್ಚಾರ್ಜ್ ಅನ್ನು ಹೆಚ್ಚಿಸುವುದಾಗಿ ಸಂಸ್ಥೆ ಪ್ರಕಟಿಸಿದೆ. ಪರಿಷ್ಕೃತ ಶುಲ್ಕಗಳು 2026ರ ಅಕ್ಟೋಬರ್ 6ರ ಮಧ್ಯರಾತ್ರಿಯಿಂದ ಮಾಡಲಾಗುವ ಎಲ್ಲಾ ಹೊಸ ಬುಕಿಂಗ್‌ಗಳಿಗೆ ಅನ್ವಯವಾಗಲಿವೆ ಎಂದು ತಿಳಿದು ಬಂದಿದೆ.
ಪ್ರಯಾಣದ ದೂರಕ್ಕೆ ಅನುಗುಣವಾಗಿ ದೇಶೀಯ ವಿಮಾನಗಳ ಮೇಲಿನ ಇಂಧನ ಸರ್ಚಾರ್ಜ್‌ನಲ್ಲಿ ರೂ. 100ರಿಂದ ರೂ. 350ರವರೆಗೆ ಹೆಚ್ಚಳ ಮಾಡಲಾಗಿದೆ. ಇದರೊಂದಿಗೆ ದೇಶೀಯ ವಿಮಾನಗಳ ಇಂಧನ ಶುಲ್ಕವು ಕನಿಷ್ಠ ರೂ. 375ರಿಂದ ಗರಿಷ್ಠ ರೂ. 1,300ರವರೆಗೆ ಇರಲಿದೆ. ಹೀಗಾಗಿ ಈಗಾಗಲೇ ವಿಮಾನ ಟಿಕೆಟ್‌ಗಾಗಿ ಹೆಚ್ಚಿನ ಹಣ ಪಾವತಿಸುತ್ತಿರುವ ಪ್ರಯಾಣಿಕರಿಗೆ ಮತ್ತಷ್ಟು ಹೊರೆಯಾಗಲಿದೆ.
ಇಂಡಿಗೋ ನಿಗದಿಪಡಿಸಿರುವ ಪರಿಷ್ಕೃತ ದೇಶೀಯ ಇಂಧನ ಸರ್ಚಾರ್ಜ್ ಪ್ರಕಾರ, 500 ಕಿಲೋಮೀಟರ್‌ವರೆಗೆ ಪ್ರಯಾಣಿಸುವವರಿಗೆ ರೂ. 375 ಶುಲ್ಕ ಇರಲಿದೆ. 501ರಿಂದ 1,000 ಕಿಲೋಮೀಟರ್‌ವರೆಗಿನ ಪ್ರಯಾಣಕ್ಕೆ ರೂ. 600, 1,001ರಿಂದ 1,500 ಕಿಲೋಮೀಟರ್‌ವರೆಗೆ ರೂ. 900 ಮತ್ತು 1,501ರಿಂದ 2,000 ಕಿಲೋಮೀಟರ್‌ವರೆಗೆ ರೂ. 1,150 ಶುಲ್ಕ ವಿಧಿಸಲಾಗುತ್ತದೆ. 2,000 ಕಿಲೋಮೀಟರ್‌ಗಿಂತ ಹೆಚ್ಚಿನ ದೂರದ ಪ್ರಯಾಣಕ್ಕೆ ರೂ. 1,300 ಇಂಧನ ಸರ್ಚಾರ್ಜ್ ಇರಲಿದೆ.
ಇನ್ನು ಅಂತಾರಾಷ್ಟ್ರೀಯ ವಿಮಾನಗಳಿಗೂ ಇಂಧನ ಶುಲ್ಕ ಹೆಚ್ಚಳವಾಗಿದೆ. ಅಂತಾರಾಷ್ಟ್ರೀಯ ವಿಮಾನಗಳ ಟಿಕೆಟ್‌ಗಳ ಮೇಲಿನ ಇಂಧನ ಸರ್ಚಾರ್ಜ್ ಅನ್ನು ರೂ. 1,000ರಿಂದ ರೂ. 10,000ರವರೆಗೆ ಹೆಚ್ಚಿಸಲಾಗಿದೆ. ಇದರಿಂದ ವಿದೇಶ ಪ್ರಯಾಣಕ್ಕೆ ಸಿದ್ಧವಾಗಿರುವ ಪ್ರಯಾಣಿಕರ ಬಜೆಟ್ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ಇಂಧನ ಶುಲ್ಕ ಹೆಚ್ಚಳಕ್ಕೆ ಪ್ರಮುಖ ಕಾರಣ ಜಾಗತಿಕ ಮಟ್ಟದಲ್ಲಿ ವಿಮಾನ ಇಂಧನದ ಬೆಲೆ ಏರಿಕೆಯಾಗಿರುವುದು. ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಏವಿಯೇಷನ್ ಟರ್ಬೈನ್ ಫ್ಯುಯೆಲ್ (ATF) ಬೆಲೆಗಳಲ್ಲಿ ಶೇ.13ರಿಂದ 14ರಷ್ಟು ಏರಿಕೆಯಾಗಿದೆ ಎಂದು ತಿಳಿಸಲಾಗಿದೆ.
ವಿಮಾನಯಾನ ಸಂಸ್ಥೆಗಳ ಒಟ್ಟು ಕಾರ್ಯಾಚರಣಾ ವೆಚ್ಚದಲ್ಲಿ ಇಂಧನದ ಪಾಲು ಶೇ.40ಕ್ಕಿಂತ ಹೆಚ್ಚಿರುವ ಹಿನ್ನೆಲೆಯಲ್ಲಿ, ಹೆಚ್ಚಿದ ವೆಚ್ಚವನ್ನು ಸರಿದೂಗಿಸಲು ಫ್ಯುಯೆಲ್ ಸರ್ಚಾರ್ಜ್ ಪರಿಷ್ಕರಿಸಲಾಗಿದೆ. ಹಬ್ಬದ ಋತು ಆರಂಭವಾಗುತ್ತಿರುವ ಸಂದರ್ಭದಲ್ಲೇ ಈ ಶುಲ್ಕ ಹೆಚ್ಚಳವಾಗಿರುವುದು ಪ್ರಯಾಣಿಕರಿಗೆ ಹೆಚ್ಚುವರಿ ಹೊರೆ ತಂದಿದೆ.
ಹೀಗಾಗಿ ಅಕ್ಟೋಬರ್ 6ರ ಮಧ್ಯರಾತ್ರಿಯ ನಂತರ ಇಂಡಿಗೋದಲ್ಲಿ ಹೊಸದಾಗಿ ವಿಮಾನ ಟಿಕೆಟ್ ಬುಕ್ ಮಾಡುವವರು ಪ್ರಯಾಣದ ದೂರ ಮತ್ತು ಮಾರ್ಗಕ್ಕೆ ಅನುಗುಣವಾಗಿ ಹೆಚ್ಚುವರಿ ಇಂಧನ ಶುಲ್ಕ ಪಾವತಿಸಬೇಕಾಗುತ್ತದೆ.
