‘ ಗಿಫ್ಟ್ ಸಿಟಿ’ಯಲ್ಲಿ ನೂತನ ‘ಗ್ಲೋಬಲ್ ಟೆಕ್ ಸೆಂಟರ್’ ಆರಂಭಿಸಿದ HCL ಟೆಕ್‌

ಯುವಕರಿಗೆ ಭರ್ಜರಿ ಉದ್ಯೋಗಾವಕಾಶ

ಜ್ಞಾನಪೀಠ ಪ್ರಶಸ್ತಿ (4)

ಅಹಮದಾಬಾದ್‌ ಜುಲೈ 18: ಜಾಗತಿಕ ತಂತ್ರಜ್ಞಾನ ಸೇವೆಗಳಲ್ಲಿ ಮುಂಚೂಣಿಯಲ್ಲಿರುವ ಪ್ರಖ್ಯಾತ ‘ಎಚ್‌ಸಿಎಲ್ ಟೆಕ್’ ಕಂಪನಿ, ಇದೀಗ ಗುಜರಾತ್‌ನ ಪ್ರತಿಷ್ಠಿತ ‘ಗಿಫ್ಟ್ ಸಿಟಿ’ಯಲ್ಲಿ ತನ್ನ ಹೊಸ ‘ಗ್ಲೋಬಲ್ ಟೆಕ್ನಾಲಜಿ ಸೆಂಟರ್’ ಅನ್ನು ಆರಂಭಿಸಿದೆ.

ಹಣಕಾಸು ವಲಯದ ಜಾಗತಿಕ ಗ್ರಾಹಕರಿಗೆ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಪರಿಹಾರಗಳನ್ನು ಒದಗಿಸುವ ಉದ್ದೇಶದಿಂದ ಈ ಬೃಹತ್ ಕೇಂದ್ರವನ್ನು ನಿರ್ಮಿಸಲಾಗಿದೆ. ಇದು ಕೇವಲ ಸೇವಾ ಕೇಂದ್ರವಾಗಿರದೆ, ಮುಂದಿನ ಪೀಳಿಗೆಯ ತಂತ್ರಜ್ಞಾನಗಳ ಸಂಶೋಧನೆ ಹಾಗೂ ಪ್ರತಿಭೆಗಳನ್ನು ಬೆಳೆಸುವ ತರಬೇತಿ ಕೇಂದ್ರವಾಗಿಯೂ ಕಾರ್ಯನಿರ್ವಹಿಸಲಿದೆ.

ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಂಘವಿ ಅವರು ಈ ನೂತನ ತಂತ್ರಜ್ಞಾನ ಕೇಂದ್ರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಎಚ್‌ಸಿಎಲ್ ಟೆಕ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿ. ವಿಜಯ ಕುಮಾರ್ ಹಾಗೂ ಗಿಫ್ಟ್ ಸಿಟಿಯ ಎಂಡಿ ಮತ್ತು ಗ್ರೂಪ್ ಸಿಇಒ ಸಂಜಯ್ ಕೌಲ್ ಉಪಸ್ಥಿತರಿದ್ದರು.

ಯುವಕರಿಗೆ ಉದ್ಯೋಗ, ತರಬೇತಿಗೆ ಒತ್ತು

ಸ್ಥಳೀಯ ಯುವಕರಲ್ಲಿ ಕೌಶಲ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಎಚ್‌ಸಿಎಲ್ ಟೆಕ್ ಈ ಮಹತ್ವದ ಹೆಜ್ಜೆಯಿಟ್ಟಿದೆ. ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳ ನಡುವಿನ ಬಾಂಧವ್ಯವನ್ನು ಹೆಚ್ಚಿಸಲು, ಗಾಂಧಿನಗರದ ಐಐಟಿ ಮತ್ತು ಗುಜರಾತ್ ತಾಂತ್ರಿಕ ವಿಶ್ವವಿದ್ಯಾಲಯದ (ಜಿಟಿಯು) ಜೊತೆಗೆ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿದೆ.

ಈ ಒಪ್ಪಂದದ ಅಡಿಯಲ್ಲಿ, ವಿದ್ಯಾರ್ಥಿಗಳಿಗೆ ಹಣಕಾಸು ವಲಯದಲ್ಲಿ ಎಐ ಬಳಕೆ, ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಜಾಗತಿಕ ಡಿಜಿಟಲ್ ಬದಲಾವಣೆಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.

ʼಗಿಫ್ಟ್ ಸಿಟಿ ಜಾಗತಿಕ ಟೆಕ್‌ಫಿನ್ ಹಬ್ ಆಗಲಿದೆʼ-ಹರ್ಷ ಸಂಘವಿ ವಿಶ್ವಾಸ

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಹರ್ಷ ಸಂಘವಿ, “ಗಿಫ್ಟ್ ಸಿಟಿಗೆ ಎಚ್‌ಸಿಎಲ್‌ ಟೆಕ್‌ ಅನ್ನು ಸ್ವಾಗತಿಸಲು ನಮಗೆ ಅತೀವ ಸಂತೋಷವಾಗುತ್ತಿದೆ. ಸ್ಥಳೀಯ ಪ್ರತಿಭೆಗಳನ್ನು ಪೋಷಿಸಿ, ಗುಜರಾತ್‌ನ ಯುವಕರಿಗೆ ಜಾಗತಿಕ ಮಟ್ಟದ ಉದ್ಯೋಗಾವಕಾಶಗಳನ್ನು ಮನೆಯಂಗಳದಲ್ಲೇ ಕಲ್ಪಿಸುವ ಕಂಪನಿಯ ಪ್ರಯತ್ನ ಶ್ಲಾಘನೀಯ. ಈ ಹೊಸ ಟೆಕ್ ಸೆಂಟರ್ ಮತ್ತು ಎಐ ಲ್ಯಾಬ್‌ನ ಸ್ಥಾಪನೆಯು ಗಿಫ್ಟ್ ಸಿಟಿಯನ್ನು ವಿಶ್ವದ ಪ್ರಮುಖ ‘ಟೆಕ್‌ಫಿನ್’ ಹಬ್ ಆಗಿ ಮಾಡುವ ನಮ್ಮ ಕನಸಿಗೆ ಬಲ ತುಂಬಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಚ್‌ಸಿಎಲ್ ಟೆಕ್ ಸಿಇಒ ಸಿ. ವಿಜಯಕುಮಾರ್ ಮಾತನಾಡಿ, “ಗುಜರಾತ್ ತನ್ನ ಪ್ರಗತಿಪರ ನೀತಿಗಳಿಗೆ ಹೆಸರಾಗಿದೆ. ಗಿಫ್ಟ್ ಸಿಟಿ ವಿಶ್ವದರ್ಜೆಯ ಮೂಲಸೌಕರ್ಯವನ್ನು ಹೊಂದಿದ್ದು, ಇಲ್ಲಿ ಎಐ ಆಧಾರಿತ ನವೀನ ಪರಿಹಾರಗಳನ್ನು ರೂಪಿಸಲು ನಾವು ಉತ್ಸುಕರಾಗಿದ್ದೇವೆ. ಸ್ಥಳೀಯ ತಂತ್ರಜ್ಞಾನ ವ್ಯವಸ್ಥೆಗೆ ಕೊಡುಗೆ ನೀಡುವುದು ಮತ್ತು ಶೈಕ್ಷಣಿಕ ಸಂಸ್ಥೆಗಳ ಸಹಯೋಗದೊಂದಿಗೆ ಭವಿಷ್ಯಕ್ಕೆ ಸಿದ್ಧವಿರುವ ಪ್ರತಿಭಾವಂತ ಯುವ ಪಡೆಯನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ,” ಎಂದರು.

ಎಚ್‌ಸಿಎಲ್‌ ಟೆಕ್ ಜಾಗತಿಕ ಮಟ್ಟದ ಪ್ರಮುಖ ತಂತ್ರಜ್ಞಾನ ಕಂಪನಿಯಾಗಿದ್ದು, 60 ದೇಶಗಳಲ್ಲಿ 2,23,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಎಐ, ಡಿಜಿಟಲ್ ಎಂಜಿನಿಯರಿಂಗ್, ಕ್ಲೌಡ್ ಮತ್ತು ಸಾಫ್ಟ್‌ವೇರ್ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕಂಪನಿ, ಹಣಕಾಸು, ಉತ್ಪಾದನೆ, ಟೆಲಿಕಾಂ, ಮತ್ತು ರಿಟೇಲ್ ಸೇರಿದಂತೆ ಎಲ್ಲಾ ಪ್ರಮುಖ ವಲಯಗಳ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ.

Exit mobile version