ಬೆಂಗಳೂರು (ಜುಲೈ 14): ಭಾರತೀಯ ಕಾರ್ಪೊರೇಟ್ ಜಗತ್ತು ಕ್ಲೌಡ್, ಕೃತಕ ಬುದ್ಧಿಮತ್ತೆ (ಎಐ) ಹಾಗೂ ಡಿಜಿಟಲ್ ರೂಪಾಂತರದತ್ತ ವೇಗವಾಗಿ ಹೆಜ್ಜೆ ಹಾಕುತ್ತಿದೆ. ಆದರೆ, ಈ ತಂತ್ರಜ್ಞಾನಗಳ ಮೇಲೆ ಮಾಡುತ್ತಿರುವ ಹೂಡಿಕೆಗೆ ತಕ್ಕಂತೆ ಕಂಪನಿಗಳು ನಿಖರವಾದ ಲೆಕ್ಕ ಇಟ್ಟುಕೊಳ್ಳುವಲ್ಲಿ ವಿಫಲವಾಗಿವೆ ಎನ್ನುವ ಸ್ಫೋಟಕ ಮಾಹಿತಿಯನ್ನು ಜಾಗತಿಕ ಐಟಿ ದಿಗ್ಗಜ ‘ಕಾಗ್ನಿಜೆಂಟ್’ ಹೊರಹಾಕಿದೆ.
ಕಾಗ್ನಿಜೆಂಟ್ ಬಿಡುಗಡೆ ಮಾಡಿರುವ ʼಸ್ಮಾರ್ಟರ್ ಐಟಿ ಸ್ಪೆಂಡ್: ಫ್ರಂ ಕಾಸ್ಟ್ ಕಂಟ್ರೋಲ್ ಟು ಕಾಸ್ಟ್ ಇಂಟಲಿಜೆನ್ಸ್ʼ ಎಂಬ ವರದಿಯಲ್ಲಿ ಈ ಅಂಶಗಳು ಬೆಳಕಿಗೆ ಬಂದಿವೆ. 3,000 ಕೋಟಿ ರೂ.ಗೂ ಅಧಿಕ ವಾರ್ಷಿಕ ವಹಿವಾಟು ನಡೆಸುವ 105 ಹಿರಿಯ ಉದ್ಯಮ ಮತ್ತು ತಂತ್ರಜ್ಞಾನ ನಾಯಕರ ಸಮೀಕ್ಷೆಯ ಆಧಾರದ ಮೇಲೆ ʼಡನ್ & ಬ್ರಾಡ್‌ಸ್ಟ್ರೀಟ್ʼ ಸಂಸ್ಥೆ ಈ ವರದಿಯನ್ನು ಸಿದ್ಧಪಡಿಸಿದೆ.
ಏನಿದು ಸಮಸ್ಯೆ? ವರದಿ ಹೇಳುವುದೇನು?
ಕಂಪನಿಗಳ ಐಟಿ ಬಜೆಟ್ ಹೆಚ್ಚಾಗುತ್ತಿದೆ. ಆದರೆ, ಆ ಹಣವು ವಿವಿಧ ಪ್ಲಾಟ್‌ಫಾರ್ಮ್‌ಗಳು, ಟೂಲ್‌ಗಳು ಮತ್ತು ವಿಭಾಗಗಳಲ್ಲಿ ಹಂಚಿಹೋಗಿದೆ. ಒಂದೇ ಸೂರಿನಡಿ ಡೇಟಾ ಸಿಗದೇ ಇರುವುದರಿಂದ ನಾಯಕರಿಗೆ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.
- ಸಮೀಕ್ಷೆಯ ಪ್ರಕಾರ, ಕೇವಲ 49% ರಷ್ಟು ಕಂಪನಿಗಳು ಮಾತ್ರ ತುರ್ತು ಸಂದರ್ಭದಲ್ಲಿ ಐಟಿ ಬಜೆಟ್ ಅನ್ನು ಬದಲಾಯಿಸುವ/ಹೊಂದಿಸುವ ವ್ಯವಸ್ಥೆ ಹೊಂದಿವೆ.
- ಬಜೆಟ್ ಅನ್ನು ತ್ವರಿತವಾಗಿ ಮರುಹೊಂದಿಸಲು ಕಠಿಣವಾದ ಬಜೆಟ್ ನಿಯಮಗಳು (ಶೇ. 64), ಸಾಂಸ್ಥಿಕ ವಿರೋಧ (ಶೇ. 51) ಮತ್ತು ರಿಯಲ್-ಟೈಮ್ ಡೇಟಾದ ಕೊರತೆ (ಶೇ. 31) ಅಡ್ಡಿಯಾಗಿವೆ.
- ಶೇ. 62ರಷ್ಟು ಸಂಸ್ಥೆಗಳು ಆಟೋಮ್ಯಾಟಿಕ್ ಕಾಸ್ಟ್ ಮ್ಯಾನೇಜ್ಮೆಂಟ್ ಪ್ಲಾಟ್ಫಾರ್ಮ್ಗಳನ್ನು ಬಳಸುತ್ತಿದ್ದರೂ, ಅವುಗಳಿಂದ ಬರುವ ಮಾಹಿತಿಯನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಎಡವುತ್ತಿವೆ.
- ಪ್ರಸ್ತುತ, ವೆಚ್ಚವನ್ನು ಕಡಿಮೆ ಮಾಡಲು ಕಂಪನಿಗಳು ಕ್ಲೌಡ್ ರೈಟ್ಸೈಜಿಂಗ್ (ಶೇ. 70), ವರ್ಕ್ಲೋಡ್ ಆಪ್ಟಿಮೈಸೇಶನ್ (ಶೇ. 62), ಮತ್ತು ಅಪ್ಲಿಕೇಶನ್ ರೇಷನಲೈಸೇಶನ್ (ಶೇ. 60) ತಂತ್ರಗಳನ್ನು ಬಳಸುತ್ತಿವೆ.
ಇದಕ್ಕೆ ಪರಿಹಾರವೇನು?
ಸಮಸ್ಯೆಗೆ ಪರಿಹಾರವನ್ನೂ ಸೂಚಿಸಿರುವ ಕಾಗ್ನಿಜೆಂಟ್, ಸಂಸ್ಥೆಗಳು ಸಾಂಪ್ರದಾಯಿಕ ಕಾಸ್ಟ್ ರಿವ್ಯೂಗಳನ್ನು ಬಿಟ್ಟು, ನಿರಂತರವಾಗಿ ಡೇಟಾ ಒದಗಿಸುವ ʼಎಐ-ಆಧಾರಿತ ಕಾಸ್ಟ್ ಇಂಟೆಲಿಜೆನ್ಸ್ʼ ವ್ಯವಸ್ಥೆಯತ್ತ ಮುಖ ಮಾಡಬೇಕು ಎಂದು ಹೇಳಿದೆ.
ಐಟಿ ಮತ್ತು ಹಣಕಾಸು ವಿಭಾಗಗಳು ಜಂಟಿಯಾಗಿ ಕಾರ್ಯನಿರ್ವಹಿಸಲು ‘ಫಿನ್‌ಆಪ್ಸ್ʼ ಮಾದರಿಗಳನ್ನು ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ಇದರಿಂದ ಶೇ. 25ರವರೆಗೂ ಅನಗತ್ಯ ಖರ್ಚನ್ನು ಉಳಿಸಬಹುದು ಎಂದು ವರದಿ ತಿಳಿಸಿದೆ.
ಈ ಬಗ್ಗೆ ಮತ್ತಷ್ಟು ವಿವರವಾಗಿ ಮಾತನಾಡಿರುವ ಕಾಗ್ನಿಜೆಂಟ್‌ನ ಉಪಾಧ್ಯಕ್ಷ ಹಾಗೂ ಭಾರತದ ಮುಖ್ಯಸ್ಥ ಅಚಲ್ ಕಟಾರಿಯಾ, “ಇಂದು ಉದ್ಯಮಗಳು ಎಐ, ಕ್ಲೌಡ್ ಮತ್ತು ಡಿಜಿಟಲ್ ಉಪಕ್ರಮಗಳನ್ನು ಏಕಕಾಲದಲ್ಲಿ ಅಳವಡಿಸಿಕೊಳ್ಳುತ್ತಿರುವ ಕಾರಣ ಅಭೂತಪೂರ್ವ ಸವಾಲುಗಳನ್ನು ಎದುರಿಸುತ್ತಿವೆ. ತಂತ್ರಜ್ಞಾನದ ಮೇಲಿನ ಹೂಡಿಕೆ ಹೆಚ್ಚಾಗುತ್ತಿದ್ದರೂ, ಆ ಹಣ ಎಲ್ಲಿ ಖರ್ಚಾಗುತ್ತಿದೆ ಎಂಬ ಸ್ಪಷ್ಟತೆ ಇಲ್ಲದಿರುವುದು ಅತಿ ದೊಡ್ಡ ಲೋಪವಾಗಿದೆ. ಇದನ್ನು ಸರಿಪಡಿಸಲು ಸಾಂಪ್ರದಾಯಿಕ ವೆಚ್ಚ ನಿರ್ವಹಣೆಯಿಂದ, ಭವಿಷ್ಯದ ‘ಎಐ-ಚಾಲಿತ ಕಾಸ್ಟ್ ಇಂಟೆಲಿಜೆನ್ಸ್’ ಕಡೆಗೆ ಸಾಗಬೇಕಿದೆ. ಕಾಗ್ನಿಜೆಂಟ್ ಸಂಸ್ಥೆಯು, ಎಐ-ಚಾಲಿತ ಫಿನ್‌ಆಪ್ಸ್ ಸಾಮರ್ಥ್ಯಗಳನ್ನು ನಿರ್ಮಿಸುವ ಮೂಲಕ ಕಂಪನಿಗಳ ಐಟಿ ಹೂಡಿಕೆಗೆ ಹೆಚ್ಚಿನ ಮೌಲ್ಯ ತಂದುಕೊಡಲು ಪಾಲುದಾರನಾಗಿ ಕಾರ್ಯನಿರ್ವಹಿಸುತ್ತಿದೆ,” ಎಂದು ಹೇಳಿದ್ದಾರೆ.
