2016ರಲ್ಲಿ ಭಾರತದಲ್ಲಿ ನೋಟು ಅಮಾನ್ಯೀಕರಣ ಘೋಷಣೆ ಮಾಡಲಾಗಿತ್ತು. ಹಿಂದಿದ್ದ 500 ರೂಪಾಯಿ ಮತ್ತು 1 ಸಾವಿರ ರೂಪಾಯಿ ಮುಖಬೆಲೆ ನೋಟುಗಳನ್ನು ಹಿಂಪಡೆಯಲಾಗಿತ್ತು. ಇದರ ಬದಲಿಗೆ 500 ರೂಪಾಯಿ ಹೊಸ ನೋಟು ಮತ್ತು 2 ಸಾವಿರ ರೂಪಾಯಿ ನೋಟುಗಳನ್ನು ಚಲಾವಣೆಗೆ ತರಲಾಗಿತ್ತು. ಇದಾದ ಬಳಿಕ ಭಾರತದಲ್ಲಿ ಡಿಜಿಟಲ್ ಕ್ರಾಂತಿ ಶುರುವಾಗಿತ್ತು. ನೋಟು ಅಮಾನ್ಯೀಕರಣಕ್ಕೂ ಮೊದಲಿನಿಂದ ಯುಪಿಐ ಪೇಮೆಂಟ್ ವ್ಯವಸ್ಥೆ ಅಸ್ತಿತ್ವದಲ್ಲಿತ್ತು. ಆದರೆ, ಅದು ಅಷ್ಟು ಜನಪ್ರಿಯವಾಗಿರಲಿಲ್ಲ. ನೋಟು ಅಮಾನ್ಯೀಕರಣದ ಬಳಿಕ ಭಾರತದಲ್ಲಿ ಡಿಜಿಟಲ್ ಪೇಮೆಂಟ್ ಕ್ರಾಂತಿ ನಡೆದಿದೆ.
ದೊಡ್ಡ ಮಾಲ್‌ಗಳಿಂದ ಹಿಡಿದು, ಬೀದಿ ಬದಿ ತರಕಾರಿ ಮಾರುವವರು ಈಗ ಯುಪಿಐ ಪೇಮೆಂಟ್ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಸ್ಕ್ಯಾನ್ ಅಂಡ್ ಪೇ ಈಗ ಭಾರತದಲ್ಲಿ ಭಾರಿ ಫೇಮಸ್ ಆಗಿದೆ. ನಿಮ್ಮ ಬಳಿ ಒಂದೇ ಒಂದು ಯುಪಿಐ ಆ್ಯಪ್ ಇಲ್ಲ ಎಂದರೆ ಜನ ನಿಮ್ಮನ್ನು ವಿಚಿತ್ರವಾಗಿ ನೋಡುತ್ತಾರೆ. ಅಷ್ಟರ ಮಟ್ಟಿಗೆ ಯುಪಿಐ ಕ್ರಾಂತಿ ಆಗಿದೆ. ಇಷ್ಟಾದರೂ ಕೆಲವರು ಇಂದಿಗೂ ಹಣದ ವಹಿವಾಟು ನಡೆಸಲು ಬ್ಯಾಂಕುಗಳು, ಎಟಿಎಂಗಳನ್ನು ನಂಬಿದ್ದಾರೆ. ಅವರಿಗೆ ಆರ್‌ಬಿಐ ಶಾಕಿಂಗ್ ನ್ಯೂಸ್ ನೀಡಿದೆ.
ಹಿರಿಯ ನಾಗರಿಕರು, ಯುಪಿಐ ಬಳಕೆ ಬಗ್ಗೆ ಗೊತ್ತಿಲ್ಲದಿರುವವರು ಈಗಲೂ ಬ್ಯಾಂಕು ಮತ್ತು ಎಟಿಎಂಗಳನ್ನು ನಂಬಿಕೊಂಡಿದ್ದಾರೆ. ಬ್ಯಾಂಕುಗಳಿಗಿಂತಲೂ ಎಟಿಎಂಗಳೇ ಇವರಿಗೆ ಆಧಾರವಾಗಿವೆ. ಹೆಚ್ಚಾಗಿ ಎಟಿಎಂ ಬಳಕೆ ಮಾಡುವವರಿಗೆ ಆರ್‌ಬಿಐ ಶಾಕ್ ನೀಡಿದೆ. ಈ ಹಿಂದಿನಿಂದಲೂ ಬ್ಯಾಂಕುಗಳು ಎಟಿಎಂ ಬಳಕೆದಾರ ಶುಲ್ಕ ಹೆಚ್ಚಿಸುವಂತೆ ಆರ್‌ಬಿಐ ಮತ್ತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮೇಲೆ ಒತ್ತಡ ಹೇರುತ್ತಿದ್ದವು. ಆದರೆ, ಆರ್‌ಬಿಐ ಮತ್ತು ಎನ್‌ಸಿಪಿಐ ಇದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ದಿನದಿಂದ ದಿನಕ್ಕೆ ಎಟಿಎಂ ನಿರ್ವಹಣೆ ಹೊರೆ ಹೆಚ್ಚುತ್ತಿದೆ. ಹೀಗಾಗಿ ದಯವಿಟ್ಟು ಶುಲ್ಕ ಹೆಚ್ಚಿಸಿ ಎಂದು ಬ್ಯಾಂಕುಗಳು ಮನವಿ ಮಾಡಿದ್ದವು. ಇದಕ್ಕೆ ಈಗ ಒಪ್ಪಿಗೆ ಸಿಕ್ಕಿದೆ.
ಮೇ 1ರಿಂದ ಎಟಿಎಂ ಬಳಕೆ ಶುಲ್ಕ ಹೆಚ್ಚಳವಾಗಲಿದೆ. ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ನಗರಗಳನ್ನು ಮೆಟ್ರೋ ಸಿಟಿಗಳು ಎಂದು ಪರಿಗಣಿಸಲಾಗಿದೆ. ಈ ನಗರಗಳಲ್ಲಿ ತಮ್ಮದೇ ಬ್ಯಾಂಕುಗಳ ಎಟಿಎಂಗಳಲ್ಲಿ ತಿಂಗಳಲ್ಲಿ 5 ಬಾರಿ ಉಚಿತವಾಗಿ ವಹಿವಾಟು ನಡೆಸಬಹುದು. ಇತರ ಬ್ಯಾಂಕುಗಳ ಎಟಿಎಂಗಳಲ್ಲಿ 3 ಬಾರಿ ಉಚಿತವಾಗಿ ವಹಿವಾಟು ನಡೆಸಬಹುದು. ಹೆಚ್ಚುವರಿಯಾಗಿ ನಡೆಸುವ ಪ್ರತಿ ವಹಿವಾಟಿಗೆ ಪ್ರಸ್ತುತ 17 ರೂಪಾಯಿ ಶುಲ್ಕ ವಿಧಿಸಲಾಗುತ್ತಿತ್ತು. ಈಗ ಅದು 19 ರೂಪಾಯಿಗೆ ಏರಿಕೆಯಾಗಲಿದೆ.
ಮೆಟ್ರೋ ನಗರಗಳನ್ನು ಹೊರತುಪಡಿಸಿ ಇತರ ನಗರಗಳಲ್ಲಿ ಖಾತೆ ಹೊಂದಿರುವ ಗ್ರಾಹಕರು ತಮ್ಮದೇ ಬ್ಯಾಂಕಿನ ಎಟಿಎಂ ಮತ್ತು ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ತಿಂಗಳಿಗೆ ತಲಾ 5 ಬಾರಿ ಉಚಿತವಾಗಿ ವಹಿವಾಟು ನಡೆಸಬಹುದು. ಹೆಚ್ಚುವರಿ ವಹಿವಾಟು ನಡೆಸಿದಲ್ಲಿ ಪ್ರತಿ ವಹಿವಾಟಿಗೆ 19 ರೂಪಾಯಿ ಹೆಚ್ಚುವರಿ ಶುಲ್ಕ ಪಾವತಿಸಬೇಕು. ಹಣಕಾಸು ಸಂಬಂಧಿತ ವಹಿವಾಟು ಎಂದರೆ, ನಗದು ಹಿಂಪಡೆಯುವುದಕ್ಕೆ ಎಟಿಎಂ ಬಳಸಿದಲ್ಲಿ 19 ರೂಪಾಯಿ, ಖಾತೆ ಸಂಬಂಧಿತ ವಹಿವಾಟು ಎಂದರೆ, ಖಾತೆಯಲ್ಲಿ ಉಳಿದಿರುವ ಹಣದ ಮಾಹಿತಿ, ಪಿನ್ ಚೇಂಜ್, ಮಿನಿ ಸ್ಟೇಟ್ಮೆಂಟ್ ಅಥವಾ ಇತರ ಮಾಹಿತಿ ಪಡೆಯಲು ಪ್ರತಿ ವಹಿವಾಟಿಗೆ 7 ರೂಪಾಯಿ ಶುಲ್ಕ ಪಾವತಿಸಬೇಕಿದೆ.
ಆರ್‌ಬಿಐ ನೀಡಿರುವ ಮಾಹಿತಿಯಂತೆ ಭಾರತದಲ್ಲಿ 2025ರ ಜನವರಿ ವೇಳೆಗೆ ಸುಮಾರು 2,16,706 ಎಟಿಎಂಗಳು ಕಾರ್ಯ ನಿರ್ವಹಿಸುತ್ತಿವೆ. 2021ರಲ್ಲಿ ಕಳೆದ ಬಾರಿ ಎಟಿಎಂ ಬಳಕೆದಾರರ ಶುಲ್ಕ ಹೆಚ್ಚಿಸಲಾಗಿತ್ತು. 15 ರೂಪಾಯಿ ಇದ್ದ ಶುಲ್ಕವನ್ನು 17 ರೂಪಾಯಿಗೆ ಹೆಚ್ಚಿಸಲಾಗಿತ್ತು. ಭಾರತದಲ್ಲಿ ನಗದು ರಹಿತ ವಹಿವಾಟು ಹೆಚ್ಚಳವಾದ ಬಳಿಕ ಎಟಿಎಂಗಳ ಬಳಕೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. 2023ರ ಜನವರಿ ವೇಳೆಗೆ ಭಾರತದಲ್ಲಿ ಎಟಿಎಂಗಳ ಮೂಲಕ ಸುಮಾರು 57 ಕೋಟಿ ವಹಿವಾಟುಗಳು ನಡೆದಿದ್ದವು. 2024ರ ಜನವರಿ ವೇಳೆಗೆ ಭಾರತದಲ್ಲಿ ಎಟಿಎಂ ವಹಿವಾಟುಗಳ ಸಂಖ್ಯೆ 52 ಕೋಟಿ 72 ಲಕ್ಷಕ್ಕೆ ಕುಸಿದಿತ್ತು.
2025ರ ಜನವರಿಯಲ್ಲಿ ಎಟಿಎಂ ವಹಿವಾಟಿನಲ್ಲಿ ಇನ್ನೂ ಕುಸಿತ ಕಂಡಿದೆ. 2025ರ ಜನವರಿಯಲ್ಲಿ ಭಾರತದಲ್ಲಿ 48 ಕೋಟಿ 83 ಲಕ್ಷ ವಹಿವಾಟುಗಳು ಎಟಿಎಂಗಳ ಮೂಲಕ ನಡೆದಿವೆ ಎಂದು ಆರ್‌ಬಿಐ ಹೇಳಿದೆ. 2024ರ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ತಿಂಗಳಿಗೆ ಸರಾಸರಿ 1 ಕೋಟಿ 43ಲಕ್ಷ ರೂಪಾಯಿ ನಗದನ್ನು ಎಟಿಎಂಗಳ ಮೂಲಕ ಹಿಂತೆಗೆದಿದ್ದಾರೆ. ನಗದು ಹಿಂತೆಗೆತದಲ್ಲಿ ಹಿಂದಿನ ವರ್ಷಕ್ಕಿಂತಾ ಶೇಕಡ 5.51ರಷ್ಟು ಹೆಚ್ಚಳ ಕಂಡಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.
