Apple CEO ಬದಲಾವಣೆ: 15 ವರ್ಷಗಳ ಬಳಿಕ ಟಿಮ್ ಕುಕ್ ಔಟ್

Untitled design (32)

ಕ್ಯಾಲಿಫೋರ್ನಿಯಾ, ಸೆ.01: ಜಾಗತಿಕ ಟೆಕ್ ದಿಗ್ಗಜ ಆ್ಯಪಲ್ ಸಂಸ್ಥೆಯಲ್ಲಿ ಮಹತ್ವದ ನಾಯಕತ್ವ ಬದಲಾವಣೆಗೆ ವೇದಿಕೆ ಸಿದ್ಧವಾಗಿದೆ. ಕಳೆದ 15 ವರ್ಷಗಳಿಂದ ಕಂಪನಿಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿರುವ ಟಿಮ್ ಕುಕ್ ಅವರು ಇಂದು ಸೆಪ್ಟೆಂಬರ್ 1, 2026ರಂದು ಸಿಇಒ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಅವರ ಸ್ಥಾನವನ್ನು ಆ್ಯಪಲ್‌ನ ಹಾರ್ಡ್‌ವೇರ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಜಾನ್ ಟರ್ನಸ್ ವಹಿಸಿಕೊಳ್ಳಲಿದ್ದಾರೆ.

ಸಿಇಒ ಹುದ್ದೆಯಿಂದ ನಿವೃತ್ತಿಯಾದರೂ ಟಿಮ್ ಕುಕ್ ಆ್ಯಪಲ್‌ನಿಂದ ಸಂಪೂರ್ಣವಾಗಿ ದೂರವಾಗುವುದಿಲ್ಲ. ಅವರು ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ (Executive Chairman) ಮುಂದುವರಿಯಲಿದ್ದು, ಜಾಗತಿಕ ನೀತಿ ನಿರೂಪಕರು ಮತ್ತು ಸರ್ಕಾರಗಳೊಂದಿಗಿನ ಸಂಬಂಧ ಸೇರಿದಂತೆ ಆಯ್ದ ಪ್ರಮುಖ ವ್ಯವಹಾರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ.

15 ವರ್ಷಗಳಲ್ಲಿ ಆ್ಯಪಲ್‌ಗೆ ಹೊಸ ಎತ್ತರ

2011ರಲ್ಲಿ ಆ್ಯಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ಸಿಇಒ ಸ್ಥಾನದಿಂದ ಕೆಳಗಿಳಿದ ಬಳಿಕ ಟಿಮ್ ಕುಕ್ ಕಂಪನಿಯ ನೇತೃತ್ವ ವಹಿಸಿಕೊಂಡಿದ್ದರು. ಜಾಬ್ಸ್ ಅವರ ಉತ್ಪನ್ನಕೇಂದ್ರಿತ ನಾಯಕತ್ವದ ನಂತರ ಕುಕ್ ತಮ್ಮದೇ ಆದ ನಿರ್ವಹಣಾ ಶೈಲಿಯನ್ನು ರೂಪಿಸಿಕೊಂಡರು.

ಕುಕ್ ಅವರ ಅವಧಿಯಲ್ಲಿ ಆ್ಯಪಲ್‌ನ ವ್ಯವಹಾರ ಐಫೋನ್ ಮತ್ತು ಮ್ಯಾಕ್‌ಗಷ್ಟೇ ಸೀಮಿತವಾಗದೆ ಹಲವು ಹೊಸ ಉತ್ಪನ್ನ ಹಾಗೂ ಸೇವೆಗಳಿಗೆ ವಿಸ್ತರಿಸಿತು. ಆಪಲ್ ವಾಚ್ (Apple Watch), ಏರ್‌ಪಾಡ್ಸ್ (Air Pods), Home Pod ಮತ್ತು ವಿಶನ್ ಪ್ರೊ (Vision Pro) ಸೇರಿದಂತೆ ಹಲವು ಉತ್ಪನ್ನಗಳು ಮಾರುಕಟ್ಟೆಗೆ ಬಂದವು. ಇದೇ ವೇಳೆ ಆಪಲ್ ಮ್ಯೂಸಿಕ್ (Apple Music), ಐಕ್ಲೌಡ್ (iCloud), ಆಪಲ್ ಟಿವಿ+ (Apple TV+) ಮತ್ತು ಆಪಲ್ ಪೇ (Apple Pay) ಮುಂತಾದ ಸೇವಾ ವಲಯಗಳೂ ವೇಗವಾಗಿ ಬೆಳೆಯಿತು.

ಈ ಅವಧಿಯಲ್ಲಿ ಆ್ಯಪಲ್‌ನ ಮಾರುಕಟ್ಟೆ ಮೌಲ್ಯವೂ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಕಂಪನಿಯು ಇತ್ತೀಚಿನ ತ್ರೈಮಾಸಿಕಗಳಲ್ಲೂ ಬಲವಾದ ಆರ್ಥಿಕ ಕಾರ್ಯಕ್ಷಮತೆಯನ್ನು ಕಾಯ್ದುಕೊಂಡಿದೆ.

ಯಾರು ಈ ಜಾನ್ ಟರ್ನಸ್?

ಆ್ಯಪಲ್‌ನಲ್ಲಿ 25 ವರ್ಷಕ್ಕೂ ಹೆಚ್ಚು ಕಾಲ ಕೆಲಸ ಮಾಡಿರುವ ಜಾನ್ ಟರ್ನಸ್ ಕಂಪನಿಯ ಹಾರ್ಡ್‌ವೇರ್ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಐಫೋನ್, ಐಪ್ಯಾಡ್ ಹಾಗೂ ಆ್ಯಪಲ್ ಸಿಲಿಕಾನ್ ಸೇರಿದಂತೆ ಪ್ರಮುಖ ಹಾರ್ಡ್‌ವೇರ್ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಗಮನಾರ್ಹವಾಗಿದೆ.

ಎಂಜಿನಿಯರಿಂಗ್ ಹಿನ್ನೆಲೆಯುಳ್ಳ ಟರ್ನಸ್ ಇದೀಗ ಆ್ಯಪಲ್‌ನ ಮುಂದಿನ ಅಧ್ಯಾಯಕ್ಕೆ ನಾಯಕತ್ವ ನೀಡಬೇಕಿದೆ. ವಿಶೇಷವಾಗಿ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಗೂಗಲ್, ಮೈಕ್ರೋಸಾಫ್ಟ್, ಮೆಟಾ ಸೇರಿದಂತೆ ಪ್ರತಿಸ್ಪರ್ಧಿಗಳೊಂದಿಗೆ ಪೈಪೋಟಿ ನಡೆಸುವುದು ಅವರಿಗೆ ಪ್ರಮುಖ ಸವಾಲಾಗಲಿದೆ.

ಇದರ ಜೊತೆಗೆ ಜಾಗತಿಕ ಪೂರೈಕೆ ಸರಪಳಿ, ಹೊಸ ಉತ್ಪನ್ನಗಳ ಅಭಿವೃದ್ಧಿ ಮತ್ತು ಬದಲಾಗುತ್ತಿರುವ ಟೆಕ್ ಮಾರುಕಟ್ಟೆಯ ನಡುವೆ ಆ್ಯಪಲ್‌ನ ಬೆಳವಣಿಗೆಯನ್ನು ಮುಂದುವರಿಸುವ ಜವಾಬ್ದಾರಿಯೂ ಟರ್ನಸ್ ಮೇಲಿದೆ.

ಟಿಮ್ ಕುಕ್ ಅವರು ಟರ್ನಸ್ ಅವರನ್ನು ಆ್ಯಪಲ್ ಅನ್ನು ಭವಿಷ್ಯದತ್ತ ಮುನ್ನಡೆಸಲು ಸೂಕ್ತ ವ್ಯಕ್ತಿ ಎಂದು ಶ್ಲಾಘಿಸಿದ್ದಾರೆ. ಮತ್ತೊಂದೆಡೆ, ಟರ್ನಸ್ ಕೂಡ ಆ್ಯಪಲ್‌ನ ಮುಂದಿನ ಬೆಳವಣಿಗೆಯ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಇಂದಿನಿಂದ ಅಂದರೆ ಸೆಪ್ಟೆಂಬರ್ 1ರಿಂದ ಆರಂಭವಾಗಲಿರುವ ಈ ನಾಯಕತ್ವ ಬದಲಾವಣೆ, ಜಾಬ್ಸ್ ನಂತರದ ಕುಕ್ ಯುಗಕ್ಕೆ ಅಧಿಕೃತ ತೆರೆ ಎಳೆದು, ಆ್ಯಪಲ್‌ನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ.

Exit mobile version