ಭಾರತದಲ್ಲಿ ನಾಲ್ಕೂವರೆ ಲಕ್ಷ ಕೋಟಿ ರೂ. ಹೂಡಿಕೆ ಮಾಡಲು ಅಮೇಜಾನ್ ನಿರ್ಧಾರ!

Web Photo Editor (43)

ಭಾರತದಲ್ಲಿ ತಂತ್ರಜ್ಞಾನ ಮತ್ತು ಡಿಜಿಟಲ್ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಅಮೆಜಾನ್ ಸಂಸ್ಥೆ ಮಹತ್ವದ ಹೂಡಿಕೆ ಯೋಜನೆಯನ್ನು ಘೋಷಿಸಿದೆ. ಈ ಹೂಡಿಕೆ ದೇಶದ ಎಐ, ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಡಿಜಿಟಲ್ ಸೇವೆಗಳ ವಿಸ್ತರಣೆಗೆ ವೇಗ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಅಮೇಜಾನ್ ಸಿಇಒ ಆಂಡಿ ಜೆಸ್ಸಿ ಅವರು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಬಳಿಕ ಈ ಘೋಷಣೆ ಮಾಡಿದ್ದಾರೆ.

ವರದಿಗಳ ಪ್ರಕಾರ, ಭಾರತದಲ್ಲಿ ಸುಮಾರು 13 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಹೊಸ ಹೂಡಿಕೆ ಒಪ್ಪಂದವನ್ನು ಸಂಸ್ಥೆ ಮುಂದುವರೆಸುತ್ತಿದೆ. ಅಮೆಜಾನ್ ಮುಂದಿನ ಹಂತದಲ್ಲಿ 2030ರವರೆಗೆ ಹಂತ ಹಂತವಾಗಿ ಸುಮಾರು 4 ಲಕ್ಷ 53 ಸಾವಿರ ಕೋಟಿ ರೂ. ಹೂಡಿಕೆ ಮಾಡುವ ಯೋಜನೆಯನ್ನು ಹೊಂದಿದೆ. ಇದು ಕರ್ನಾಟಕ ರಾಜ್ಯದ ವಾರ್ಷಿಕ ಬಜೆಟ್‌ಗೆ ಸಮಾನ ಆಗಿದೆ.

ಈ ಬೃಹತ್ ಬಂಡವಾಳವನ್ನು ಮುಖ್ಯವಾಗಿ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಅಭಿವೃದ್ಧಿ, ಕ್ಲೌಡ್ ಸೇವೆಗಳ ವಿಸ್ತರಣೆ ಹಾಗೂ ಡಿಜಿಟಲ್ ಮೂಲಸೌಕರ್ಯ ಬಲಪಡಿಸಲು ಬಳಸಲಾಗುತ್ತದೆ. ಇದರಿಂದ ಭಾರತದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಉದ್ಯೋಗಾವಕಾಶಗಳು ಮತ್ತು ನವೀನತೆಗಳಿಗೆ ವೇಗ ಸಿಗುವ ನಿರೀಕ್ಷೆಯಿದೆ.

ಇತ್ತೀಚಿನ ತಿಂಗಳುಗಳಲ್ಲಿ ಮಾತ್ರವೇ ಅಮೆಜಾನ್ ಭಾರತದಲ್ಲಿ ಸುಮಾರು 35 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದು, ಇದು ದೇಶದ ಡಿಜಿಟಲ್ ಆರ್ಥಿಕತೆಗೆ ದೊಡ್ಡ ಉತ್ತೇಜನ ನೀಡಿದೆ. 2010ರಿಂದ 2030ರವರೆಗೆ ಭಾರತದಲ್ಲಿ ಅಮೆಜಾನ್ ಸಂಸ್ಥೆಯ ಒಟ್ಟು ಹೂಡಿಕೆ ಸುಮಾರು 88 ಬಿಲಿಯನ್ ಡಾಲರ್ ಆಗಲಿದೆ ಎಂಬ ಅಂದಾಜುಗಳು ಹೊರಬಂದಿವೆ. ಇದು ಭಾರತವನ್ನು ಜಾಗತಿಕ ಡಿಜಿಟಲ್ ಮತ್ತು ಎಐ ಹಬ್ ಆಗಿ ರೂಪಿಸುವ ದಿಶೆಯಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.

ʻನಾವು 2010ರಿಂದ ಈಗಾಗಲೇ ಭಾರತದಲ್ಲಿ 40 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದೇವೆ. ಹಿಂದಿನ ವರ್ಷ 2026–2030 ಅವಧಿಗೆ 35 ಬಿಲಿಯನ್ ಡಾಲರ್ ಹೂಡಿಕೆ ಘೋಷಿಸಿದ್ದೆವು. ಆದರೆ ಈಗ ಅದನ್ನು ಹೆಚ್ಚಿಸಿ ಹೆಚ್ಚುವರಿ 48 ಬಿಲಿಯನ್ ಡಾಲರ್ ಹೂಡಿಕೆ ಮಾಡಲಾಗುತ್ತಿದೆʼ ಎಂದು ಜ್ಯಾಸಿ ತಿಳಿಸಿದ್ದಾರೆ.

ಈ ಹೊಸ ಹೂಡಿಕೆಯಲ್ಲಿ ಪ್ರಮುಖ ಭಾಗವು ಕ್ಲೌಡ್ ಕಂಪ್ಯೂಟಿಂಗ್ ಮತ್ತು ಕೃತಕ ಬುದ್ಧಿಮತ್ತೆ (AI) ಅಭಿವೃದ್ಧಿಗೆ ಮೀಸಲಾಗಿರುತ್ತದೆ ಎಂದು ಕಂಪನಿ ತಿಳಿಸಿದೆ. ಇದಕ್ಕಾಗಿ ಹೆಚ್ಚುವರಿ 13 ಬಿಲಿಯನ್ ಡಾಲರ್ ಹೂಡಿಕೆ ಮಾಡಲಾಗಿದ್ದು, ಒಟ್ಟು ಕ್ಲೌಡ್ ಮೂಲಸೌಕರ್ಯ ಹೂಡಿಕೆ 21 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಆಗಲಿದೆ. ಈ ಹೂಡಿಕೆ ಮೂಲಕ ಮುಂಬೈ ಮತ್ತು ಹೈದರಾಬಾದ್‌ನಲ್ಲಿ ಅಮೇಜಾನ್ ವೆಬ್ ಸರ್ವೀಸಸ್ (AWS) ಡೇಟಾ ಸೆಂಟರ್ ಸಾಮರ್ಥ್ಯವನ್ನು ವಿಸ್ತರಿಸಲು ಯೋಜಿಸಲಾಗಿದೆ.

“ಭಾರತವು ಜಾಗತಿಕ ಮಟ್ಟದಲ್ಲಿ ಪ್ರಮುಖ ಕ್ಲೌಡ್ ಮತ್ತು AI ಕೇಂದ್ರವಾಗಿ ಬೆಳೆಯುತ್ತಿದೆ. ಇಲ್ಲಿನ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ, ಅದಕ್ಕಾಗಿ ನಾವು ಹೂಡಿಕೆಯನ್ನು ವಿಸ್ತರಿಸುತ್ತಿದ್ದೇವೆ” ಎಂದು ಜ್ಯಾಸಿ ಹೇಳಿದ್ದಾರೆ.

ಕಂಪನಿ 2030ರ ವೇಳೆಗೆ ಭಾರತದಲ್ಲಿ 2.8 ಮಿಲಿಯನ್ ಉದ್ಯೋಗಗಳಿಗೆ ಬೆಂಬಲ ನೀಡುವುದರಿಂದ 3.8 ಮಿಲಿಯನ್ ಉದ್ಯೋಗಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ.

ಇದೇ ವೇಳೆ, 80 ಬಿಲಿಯನ್ ಡಾಲರ್ ಮೌಲ್ಯದ ಇ-ಕಾಮರ್ಸ್ ರಫ್ತುಗಳನ್ನು ಸಾಧ್ಯವಾಗಿಸುವುದು, 1.5 ಕೋಟಿ ಸಣ್ಣ ಉದ್ಯಮಗಳಿಗೆ AI ಪ್ರಯೋಜನಗಳನ್ನು ತಲುಪಿಸುವುದು ಹಾಗೂ 40 ಲಕ್ಷ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ AI ಶಿಕ್ಷಣ ನೀಡುವ ಗುರಿಯನ್ನೂ ಅಮೇಜಾನ್ ಹೊಂದಿದೆ. ಪ್ರಧಾನಿ ಮೋದಿ ಅವರ ಅಭಿವೃದ್ಧಿ ದೃಷ್ಟಿಕೋನವನ್ನು ಪ್ರಶಂಸಿಸಿದ ಜ್ಯಾಸಿ, ಭಾರತದಲ್ಲಿ ಡಿಜಿಟಲ್ ಬೆಳವಣಿಗೆ ಅತ್ಯಂತ ವೇಗವಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ.  2010ರಿಂದ 2030ರ ಅವಧಿಯಲ್ಲಿ ಅಮೇಜಾನ್‌ನ ಭಾರತ ಹೂಡಿಕೆ 88 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಆಗಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

Exit mobile version