ಮುಂಬೈ, (ಜೂನ್ 30): ಭಾರತದ ಅತಿದೊಡ್ಡ ಖಾಸಗಿ ಬಂದರು ನಿರ್ವಹಣಾ ಸಂಸ್ಥೆಯಾದ ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ (APSEZ), ಕೇರಳದ ವಿಳಿಂಜಂ ಟ್ರಾನ್ಸ್‌ಶಿಪ್‌ಮೆಂಟ್ ಬಂದರಿನಲ್ಲಿ ಹೊಂದಿರುವ ಶೇ.49ರಷ್ಟು ಪಾಲನ್ನು ವಿಶ್ವದ ಅತಿದೊಡ್ಡ ಶಿಪ್ಪಿಂಗ್ ಕಂಪನಿಗಳಲ್ಲೊಂದಾದ ಮೆಡಿಟರೇನಿಯನ್ ಶಿಪ್ಪಿಂಗ್ ಕಂಪನಿ (MSC)ಗೆ ಮಾರಾಟ ಮಾಡಲು ನಿರ್ಧರಿಸಿದೆ ಎಂದು ಮಂಗಳವಾರ ಹೇಳಿಕೊಂಡಿದೆ.
- ವಿಳಿಂಜಂ ಬಂದರಿನ ಶೇ.49 ಪಾಲನ್ನು MSCಗೆ ಮಾರಾಟ ಮಾಡಲು ಅದಾನಿ ಪೋರ್ಟ್ಸ್ ನಿರ್ಧಾರ.
- ಒಪ್ಪಂದದ ಮೌಲ್ಯ ಸುಮಾರು 1.4 ಬಿಲಿಯನ್ ಡಾಲರ್
- ಅದಾನಿ ಗ್ರೂಪ್ ಬಳಿಯೇ ಉಳಿಯಲಿದೆ ಶೇ.51 ನಿಯಂತ್ರಣ ಪಾಲು
- ಬಂದರಿನ ಸಾಮರ್ಥ್ಯವನ್ನು 1.6 ಮಿಲಿಯನ್ನಿಂದ 4.1 ಮಿಲಿಯನ್ TEUsಗೆ ವಿಸ್ತರಿಸುವ ಯೋಜನೆ
ಈ ಒಪ್ಪಂದದ ಮೌಲ್ಯ ಸುಮಾರು 1.4 ಬಿಲಿಯನ್ ಡಾಲರ್ ಅಂದರೆ 13,000 ಕೋಟಿರೂ. ಗೂ ಅಧಿಕ ಎಂದು ವರದಿಗಳು ಹೇಳಿದೆ. ಈ ಒಪ್ಪಂದದಡಿ, ಸ್ವಿಟ್ಜರ್‌ಲ್ಯಾಂಡ್ ಮೂಲದ MSC ಕಂಪನಿಯ ಅಂಗಸಂಸ್ಥೆಯಾದ ಟರ್ಮಿನಲ್ ಇನ್ವೆಸ್ಟ್‌ಮೆಂಟ್ ಲಿಮಿಟೆಡ್ (TIL), ಅದಾನಿ ವಿಳಿಂಜಂ ಪೋರ್ಟ್ ಪ್ರೈವೇಟ್ ಲಿಮಿಟೆಡ್ (AVPPL)ನಲ್ಲಿ ಶೇ.49ರಷ್ಟು ಪಾಲನ್ನು ಪಡೆದುಕೊಳ್ಳಲಿದೆ. ಮೊದಲ ಹಂತದಲ್ಲಿ 539 ಮಿಲಿಯನ್ ಡಾಲರ್ ಪಾವತಿಸಲಾಗಲಿದ್ದು, ಉಳಿದ 858 ಮಿಲಿಯನ್ ಡಾಲರ್ ಅನ್ನು 2028ರ ಡಿಸೆಂಬರ್ ವೇಳೆಗೆ ಹಂತ ಹಂತವಾಗಿ ಪಾವತಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಕೇರಳದ ವಿಳಿಂಜಂ ಬಂದರು ಭಾರತದ ಮೊದಲ ಟ್ರಾನ್ಸ್‌ಶಿಪ್‌ಮೆಂಟ್ ಪೋರ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವ್ಯವಹಾರದ ನಂತರವೂ ಬಂದರಿನಲ್ಲಿ ಶೇ.51ರಷ್ಟು ನಿಯಂತ್ರಣ ಪಾಲು ಅದಾನಿ ಗ್ರೂಪ್ ಬಳಿಯೇ ಉಳಿಯಲಿದ್ದು, ಸಂಸ್ಥೆಯು ತನ್ನ ನಿರ್ವಹಣಾ ಹಕ್ಕನ್ನು ಮುಂದುವರಿಸಲಿದೆ.
ಹೂಡಿಕೆಯ ಪ್ರಮುಖ ಉದ್ದೇಶವೇನು?
ಈ ಹೂಡಿಕೆಯ ಪ್ರಮುಖ ಉದ್ದೇಶ ಬಂದರಿನ ಸಾಮರ್ಥ್ಯವನ್ನು ಗಣನೀಯವಾಗಿ ವಿಸ್ತರಿಸುವುದಾಗಿದೆ. ಪ್ರಸ್ತುತ ವಾರ್ಷಿಕ 1.6 ಮಿಲಿಯನ್ TEUs (Twenty-foot Equivalent Units) ಕಂಟೈನರ್‌ಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಬಂದರನ್ನು, 1.75 ಬಿಲಿಯನ್ ಡಾಲರ್ ವೆಚ್ಚದ ವಿಸ್ತರಣೆ ಯೋಜನೆಯ ಮೂಲಕ 4.1 ಮಿಲಿಯನ್ TEUsಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಮುಂದಿನ ಹಂತದಲ್ಲಿ ಇದನ್ನು 5.7 ಮಿಲಿಯನ್ TEUs ಸಾಮರ್ಥ್ಯಕ್ಕೆ ವಿಸ್ತರಿಸುವ ಯೋಜನೆಯೂ ಇದೆ.
ಈ ಪಾಲುದಾರಿಕೆಯಿಂದ ವಿಳಿಂಜಂ ಬಂದರು ಜಾಗತಿಕ ಟ್ರಾನ್ಸ್‌ಶಿಪ್‌ಮೆಂಟ್ ಹಬ್ ಆಗಿ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯಿದೆ. MSC ನಂತಹ ಅಂತರರಾಷ್ಟ್ರೀಯ ಶಿಪ್ಪಿಂಗ್ ದೈತ್ಯ ಸಂಸ್ಥೆಯೊಂದಿಗೆ ಕೈಜೋಡಿಸುವುದರಿಂದ ಬಂದರಿಗೆ ಆಗಮಿಸುವ ಸರಕು ಸಾಗಣೆ ಪ್ರಮಾಣ ಹೆಚ್ಚಾಗಲಿದ್ದು, ಕಾರ್ಯಾಚರಣೆಯ ದಕ್ಷತೆ ಮತ್ತು ಜಾಗತಿಕ ಸಂಪರ್ಕ ಮತ್ತಷ್ಟು ಸುಧಾರಿಸಲಿದೆ.
ವಿಶೇಷವೆಂದರೆ, ಕಾರ್ಯಾರಂಭ ಮಾಡಿದ ಕೇವಲ 18 ತಿಂಗಳಲ್ಲೇ ವಿಳಿಂಜಂ ಬಂದರು 2 ಮಿಲಿಯನ್ TEUs ಕಂಟೈನರ್‌ಗಳನ್ನು ನಿರ್ವಹಿಸುವ ಮೂಲಕ ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬಂದರು ಎಂಬ ದಾಖಲೆಯನ್ನು ನಿರ್ಮಿಸಿದೆ. ಅದಾನಿ ಪೋರ್ಟ್ಸ್ ಸಿಇಒ ಅಶ್ವನಿ ಗುಪ್ತಾ ಅವರ ಪ್ರಕಾರ, ಈ ಒಪ್ಪಂದವು ಭಾರತದ ಪೂರೈಕೆ ಸರಪಳಿ ಸಾಮರ್ಥ್ಯವನ್ನು ಬಲಪಡಿಸುವುದರ ಜೊತೆಗೆ ದೇಶದ ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಹೊಸ ವೇಗ ನೀಡಲಿದೆ.
