ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ರೊಚ್ಚಿಗೆದ್ದಿರುವ ಕೆ.ಎಸ್. ಈಶ್ವರಪ್ಪ, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡಿದ್ದಾರೆ. ಈಶ್ವರಪ್ಪ ಅಸಮಾಧಾನ ಶಮನಕ್ಕೆ ಬಿಜೆಪಿ ನಾಯಕರು ಸೇರಿ ರಾಜ್ಯ ಉಸ್ತುವಾರಿ ಎಲ್ಲರೂ ಪ್ರಯತ್ನ ಮಾಡಿದ್ರೂ, ಯಾವುದೇ ಪ್ರಯೋಜನ ಆಗಿಲ್ಲ. ಈಶ್ವರಪ್ಪಗೆ ಪ್ರಧಾನಿ ನರೇಂದ್ರ ಮೋದಿಯವರೆ ದೂರವಾಣಿ ಕರೆ ಮಾಡಿ ಮಾತ್ನಾಡಿದ್ದಾರೆ ಎನ್ನಲಾಗಿದೆ. ಆದರೆ ಮೋದಿ ಬಳಿಯೂ ಈಶ್ವರಪ್ಪ ಕಣದಿಂದ ಹಿಂದೆ ಸರಿಯುವ ತೀರ್ಮಾನ ತಿಳಿಸಿಲ್ಲ ಎನ್ನಲಾಗಿದೆ. ಹೀಗಾಗಿ ಈಶ್ವರಪ್ಪ ಹಠದಿಂದ ಅಕ್ಷರಶಃ ಕುದಿಯುತ್ತಿರುವ ಬಿಜೆಪಿ ನಾಯಕರು, ಇನ್ನು ಅವರನ್ನ ಸಂಧಾನ ಮಾಡುವ ಯಾವುದೇ ಪ್ರಯತ್ನ ಮಾಡುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಒಂದು ವೇಳೆ ಈಶ್ವರಪ್ಪ ನಾಮಪತ್ರ ಹಿಂಪಡೆಯದಿದ್ದರೆ, ಪಕ್ಷದಿಂದಲೇ ಉಚ್ಛಾಟನೆ ಮಾಡುವ ಸಾಧ್ಯತೆಗಳು ದಟ್ಟವಾಗಿದೆ. ಈಗಾಗಲೇ ಈಶ್ವರಪ್ಪ, ಪಕ್ಷ ಮತ್ತು ಪಕ್ಷದ ನಾಯಕರು ವಿರುದ್ಧವೂ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಕಾಂಗ್ರೆಸ್ಗೂ ಅಸ್ತ್ರವಾಗಿದೆ. ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ. ಹೀಗೆ ಬಿಟ್ಟರೆ ಶಿಸ್ತು ಉಲ್ಲಂಘಿಸುವವರಿಗೆ ಯಾವುದೇ ಭಯವಿಲ್ಲದಂತೆ ಆಗಲಿದೆ. ಕಾರ್ಯಕರ್ತರಿಗೂ ತಪ್ಪು ಸಂದೇಶ ರವಾನೆಯಾಗಿದೆ. ಹೀಗಾಗಿ ಈಶ್ವರಪ್ಪ ಅವರನ್ನ ಉಚ್ಛಾಟನೆ ಮಾಡುವ ಮಾರ್ಗ ಬಿಟ್ಟು ಬೇರೆ ದಾರಿ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.