ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ಈಗ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಸ್ಪರ್ಧಿಗಳ ನಡುವೆ ಪೈಪೋಟಿ ತಾರಕಕ್ಕೇರಿದೆ. ಪ್ರಸ್ತುತ ಮನೆಯ ಕ್ಯಾಪ್ಟನ್ ಆಗಿರುವ ಗಿಲ್ಲಿ ನಟ, ಕಾವ್ಯಾ ಅವರನ್ನು ಫಿನಾಲೆಗೆ ಕೊಂಡೊಯ್ಯಲು ‘ಫೇವರಿಸಮ್’ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಇತ್ತೀಚಿನ ಟಾಸ್ಕ್ ಒಂದರಲ್ಲಿ ಮಹಿಳಾ ಸ್ಪರ್ಧಿಗಳು ತಮಗೆ ಮೀಸಲಿರುವ ಡಬ್ಬಗಳಲ್ಲಿ ನೀರನ್ನು ಸಂಗ್ರಹಿಸಬೇಕಿತ್ತು. ಅತಿ ಹೆಚ್ಚು ನೀರು ಸಂಗ್ರಹಿಸಿದವರು ಮುಂದಿನ ಸುತ್ತಿಗೆ ಆಯ್ಕೆಯಾಗುತ್ತಾರೆ ಎಂಬುದು ಬಿಗ್ ಬಾಸ್ ಆದೇಶವಾಗಿತ್ತು. ಈ ಟಾಸ್ಕ್‌ಗೆ ಗಿಲ್ಲಿ ಮತ್ತು ಅಶ್ವಿನಿ ಉಸ್ತುವಾರಿಗಳಾಗಿದ್ದರು. ಪ್ರೋಮೋದಲ್ಲಿ ಕಂಡಂತೆ, ಸ್ಪಂದನಾ ಸಂಗ್ರಹಿಸಿದ ನೀರಿನ ಪ್ರಮಾಣ ಕಾವ್ಯಾ ಅವರಿಗಿಂತ ಹೆಚ್ಚಿದ್ದರೂ, ಗಿಲ್ಲಿ ಮಾತ್ರ ಉದ್ದೇಶಪೂರ್ವಕವಾಗಿ ಕಾವ್ಯಾ ವಿನ್ನರ್ ಎಂದು ಘೋಷಿಸಿದ್ದಾರೆ.
ಇದನ್ನು ಸಹ ಉಸ್ತುವಾರಿ ಅಶ್ವಿನಿ ನೇರವಾಗಿ ಪ್ರಶ್ನಿಸಿದ್ದಾರೆ. ಸ್ಪಂದನಾ ಬಕೆಟ್‌ನಲ್ಲಿ ನೀರು ಹೆಚ್ಚಿದೆ ಎಂದು ಅಶ್ವಿನಿ ವಾದಿಸಿದರೂ, ಗಿಲ್ಲಿ ಅದನ್ನು ಒಪ್ಪದೆ ಜಗಳಕ್ಕೆ ನಿಂತಿದ್ದಾರೆ. ಗಿಲ್ಲಿಯ ಈ ವರ್ತನೆ ಮನೆಯ ಇತರ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದೆ. ಕಾವ್ಯಾ ಅವರನ್ನು ನಾಮಿನೇಷನ್‌ನಿಂದ ಉಳಿಸಲು ಗಿಲ್ಲಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಗಿಲ್ಲಿ ನಟ ಮೊದಲಿನಿಂದಲೂ ಸತ್ಯ ಮತ್ತು ಪ್ರಾಮಾಣಿಕ ಆಟಕ್ಕೆ ಹೆಸರಾದವರು. ಆದರೆ ಕಾವ್ಯಾ ವಿಚಾರದಲ್ಲಿ ಅವರು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಅವರ ಅಭಿಮಾನಿಗಳಿಗೂ ಬೇಸರ ತಂದಿದೆ. ಒಬ್ಬರನ್ನು ಉಳಿಸಲು ತನ್ನ ಇಮೇಜ್ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಫ್ಯಾನ್ಸ್ ಅಭಿಪ್ರಾಯ ಪಡುತ್ತಿದ್ದಾರೆ. ಇಂದಿನ ಪೂರ್ಣ ಎಪಿಸೋಡ್‌ನಲ್ಲಿ ಗಿಲ್ಲಿಯ ಈ ನಿರ್ಧಾರಕ್ಕೆ ಅಸಲಿ ಕಾರಣವೇನು ಎಂಬುದು ತಿಳಿಯಲಿದೆ.
ಇನ್ನೊಂದೆಡೆ, ಸೂರಜ್ ಮನೆಯಿಂದ ಹೊರಹೋದ ಬಳಿಕ ರಾಶಿಕಾ ತಮ್ಮ ಆಟದ ಶೈಲಿಯನ್ನು ಪೂರ್ಣವಾಗಿ ಬದಲಿಸಿದ್ದಾರೆ. ನೀವು ಎಂಟರ್‌ಟೇನ್‌ಮೆಂಟ್ ಮಾಡುತ್ತಿಲ್ಲ ಎಂದು ನಾಮಿನೇಟ್ ಮಾಡಿದ್ದ ರಕ್ಷಿತಾ ಶೆಟ್ಟಿಗೆ ರಾಶಿಕಾ ಈಗ ಸರಿಯಾದ ತಿರುಗೇಟು ನೀಡುತ್ತಿದ್ದಾರೆ. ಹಗಲಿರುಳು ರಕ್ಷಿತಾ ಅವರಿಗೆ ಕಚಗುಳಿ ಇಡುತ್ತಾ, ತಮಾಷೆ ಮಾಡುತ್ತಾ ಕಾಟ ನೀಡುತ್ತಿರುವ ರಾಶಿಕಾ ಅವರ ಈ ವರ್ತನೆ ಮನೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ರಾಶಿಕಾ ಅವರ ಈ ಹೊಸ ಆಟಕ್ಕೆ ರಕ್ಷಿತಾ ಅಕ್ಷರಶಃ ಸುಸ್ತಾಗಿ ಹೋಗಿದ್ದಾರೆ. ಫಿನಾಲೆ ರೇಸ್‌ನಲ್ಲಿ ಯಾರು ಉಳಿಯುತ್ತಾರೆ ಮತ್ತು ಗಿಲ್ಲಿಯ ಫೇವರಿಸಮ್ ಆಟಕ್ಕೆ ಬಿಗ್ ಬಾಸ್ ಯಾವ ರೀತಿ ಎಚ್ಚರಿಕೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
