ಬೆಂಗಳೂರು, ಡಿಸೆಂಬರ್ 6: ಬಿಗ್ ಬಾಸ್ ಕನ್ನಡ ಮನೆಯೊಳಗೆ (Bigg Boss Kannada) ಒಳ ಜಗತ್ತಿನಿಂದ ಸಂಪೂರ್ಣವಾಗಿ ದೂರವಿರುವುದರಿಂದ, ಸಹಜವಾಗಿಯೇ ಸ್ಪರ್ಧಿಗಳ ನಡುವೆ ಆಳವಾದ ಸ್ನೇಹ (Friendship) ಮತ್ತು ಬಾಂಧವ್ಯಗಳು ಬೆಳೆಯುತ್ತವೆ. ಆದರೆ, ಈ ಆಪ್ತತೆ ಕೆಲವೊಮ್ಮೆ ‘ಜೋಡಿ ಆಟ’ವಾಗಿ ಬದಲಾಗುತ್ತದೆ. ಒಬ್ಬರ ಆಟದ ಮೇಲೆ ಮತ್ತೊಬ್ಬರ ಪ್ರಭಾವ ಅತಿಯಾಗಿ ಬೀಳುವುದರಿಂದ, ಅವರ ವೈಯಕ್ತಿಕ ಪ್ರದರ್ಶನ ಮಂಕಾಗುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆಯ ಕುರಿತು ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ (Kichcha Sudeep) ಅವರು ಸ್ಪರ್ಧಿಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಹೀಗೆ ಜೋಡಿ ಆಟ ಮುಂದುವರಿದರೆ, ನಿಮ್ಮಿಬ್ಬರಲ್ಲಿ ಒಬ್ಬರು ಮನೆಯಿಂದ ಹೊರಗೆ ಹೋಗ್ತೀರಿ ಎಂದು ಸುದೀಪ್ ಸ್ಪಷ್ಟಪಡಿಸಿದರು.
ಈ ಸೀಸನ್‌ನಲ್ಲಿ ಈಗಾಗಲೇ ಅಶ್ವಿನಿ ಗೌಡ (Ashwini Gowda) ಹಾಗೂ ಜಾನ್ವಿ (Jahnavi) ಅತ್ಯಂತ ಕ್ಲೋಸ್ ಆಗಿದ್ದರು. ಅವರ ಜೋಡಿ ಆಟದ ಪ್ರಭಾವದಿಂದಾಗಿ, ಮನೆಯಿಂದ ಹೊರಗೆ ಹೋಗುವ ಅನಿವಾರ್ಯತೆ ಜಾನ್ವಿ ಅವರಿಗೆ ಎದುರಾಗಿತ್ತು. ಈ ಬಗ್ಗೆ ಮಾತನಾಡಿದ ಸುದೀಪ್, ಜೋಡಿ ಆಟದ ಪರಿಣಾಮ ಎಷ್ಟು ಗಂಭೀರವಾಗಿರಬಹುದು ಎಂಬುದಕ್ಕೆ ಅಶ್ವಿನಿ ಅವರನ್ನೇ ಉದಾಹರಣೆಯಾಗಿ ನೀಡಿದರು.
ಜಾನ್ವಿ ಮತ್ತು ಅಶ್ವಿನಿ ಒಟ್ಟಾಗಿದ್ದರು. ಈಗ ಜಾನ್ವಿ ಹೋಗಿದ್ದಾರೆ. ನೋಡಿ, ಅಂಚಲ್ಲಿ ಒಬ್ಬರೇ ಕೂತಿದ್ದಾರೆ ಎಂದು ಅಶ್ವಿನಿ ಗೌಡ ಅವರನ್ನು ಉದಾಹರನೆ ನೀಡುವ ಮೂಲಕ, ಆಪ್ತ ಸ್ನೇಹಿತ ಹೊರಗೆ ಹೋದಾಗ ಒಬ್ಬರಿಗೆ ಎದುರಾಗುವ ಒಂಟಿತನ ಮತ್ತು ಆಘಾತದ ಮತ್ತೊಬ್ಬರಿಗೆ ಕುಗ್ಗಿಸುತ್ತದೆ ಎಂದು ಹೇಳಿದ್ದಾರೆ.
ಪ್ರಸ್ತುತ ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ಮತ್ತು ಗಿಲ್ಲಿ ನಟ ಮತ್ತು ರಾಶಿಕಾ ಶೆಟ್ಟಿ ಮತ್ತು ಸೂರಜ್ ಈ ಎರಡು ಜೋಡಿಗಳು ಹೆಚ್ಚು ಸದ್ದು ಮಾಡುತ್ತಿವೆ. ಈ ಜೋಡಿಗಳ ಆಟದ ಮೇಲೆ ಒಬ್ಬರ ಪ್ರಭಾವ ಮತ್ತೊಬ್ಬರ ಮೇಲೆ ಬೀಳುತ್ತಿರುವುದನ್ನು ಗಮನಿಸಿದ ಸುದೀಪ್, ಈ ಬಗ್ಗೆ ಎಲ್ಲರಿಗೂ ಎಚ್ಚರಿಸಿದರು. ಬಿಗ್ ಬಾಸ್ ಮನೆಯಲ್ಲಿ ಜೋಡಿ ಆಗಿರೋದು ತಪ್ಪಲ್ಲ. ಆದರೆ, ಒಬ್ಬರ ಪ್ರಭಾವ ಮತ್ತೊಬ್ಬರ ಆಟದ ಮೇಲೆ ಪ್ರಭಾವ ಬೀರುತ್ತಿದೆ ಎಂದಾಗ, ನಿಮ್ಮಿಬ್ಬರಲ್ಲಿ ಒಬ್ಬರು ಮನೆಯಿಂದ ಹೋಗಬಹುದು. ಅದಕ್ಕೆ ನೀವು ಕಾರಣ ಆಗಬಹುದು ಎಂದು ಸುದೀಪ್ ನೇರವಾಗಿ ಹೇಳಿದರು.
ವಿಶೇಷವಾಗಿ ಗಿಲ್ಲಿ ಮತ್ತು ಕಾವ್ಯಾ ಅವರ ಗೆಳೆತನದ ಕುರಿತು ಸುದೀಪ್ ಅವರು ಗಿಲ್ಲಿ ನಟನೊಂದಿಗೆ ಚರ್ಚೆ ನಡೆಸಿದರು. ನಿಮ್ಮ ಹಾಗೂ ಕಾವ್ಯ ಮಧ್ಯೆ ಒಳ್ಳೆಯ ಗೆಳೆತನ ಇರಬಹುದು. ಆದರೆ, ಅವರ ಆಟವನ್ನು ಅವರಿಗೆ ಆಡೋಕೆ ಬಿಡಿ. ನಿಮ್ಮ ಪ್ರಭಾವದಿಂದ ಅವರು ಹೊರಗೆ ಹೋಗೋ ರೀತಿ ಆದರೆ, ಆಗ ನೀವು ಕಾವು ಹೋಗಿ ಬಾ. ಹೊರಗೆ ಬಂದಮೇಲೆ ಸಿಕ್ತೀನಿ. ಈ ಫ್ರೆಂಡ್ಶಿಪ್ನ ಹೀಗೆಯೇ ಮುಂದುವರಿಸೋಣ ಎಂದು ಹೇಳ್ತೀರಾ ? ಎಂದು ಪ್ರಶ್ನೆ ಮಾಡಿದರು.
ಸುದೀಪ್ ಅವರು ಈ ಹಿಂದೆ ಹಲವು ಸೀಸನ್‌ಗಳ ಉದಾಹರಣೆ ನೀಡುತ್ತಾ, ಹಿಂದಿನ ಸೀಸನ್‌ಗಳಲ್ಲಿಯೂ ಜೋಡಿ ಆಗಿ ಅನೇಕರು ಆಡಿದ್ದಾರೆ. ಆದರೆ, ಅವರೆಲ್ಲರೂ ಮನೆಯಿಂದ ಹೊರಗೆ ಹೋಗಿದ್ದಾರೆ. ಅವರಿಗೆ ಗೆಲ್ಲೋಕೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಶಿಕಾ ಹಾಗೂ ಸೂರಜ್ ಅವರಿಗೂ ಸುದೀಪ್ ಇದೇ ಎಚ್ಚರಿಕೆ ನೀಡಿದರು. ನೀವು ಇಬ್ಬರೂ ಪ್ರತ್ಯೇಕವಾಗಿ ಆಡೋಣ ಎಂದು ಮಾತನಾಡುತ್ತೀರಾ, ಆ ಬಳಿಕ ಮತ್ತೆ ಒಂದಾಗುತ್ತೀರಾ. ಈ ಗೊಂದಲದ ಆಟವನ್ನು ನಿಲ್ಲಿಸಿ ಎಂದರು. ಸುದೀಪ್ ಅವರ ನೇರ ಮಾತುಗಳಿಗೆ ಎಲ್ಲಾ ಜೋಡಿಗಳು ತಮ್ಮ ಆಟವನ್ನು ತಿದ್ದಿಕೊಂಡು ವೈಯಕ್ತಿಕವಾಗಿ ಆಡುವ ಭರವಸೆ ಕೊಟ್ಟರು.
