ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಸ್ಪರ್ಧಿ ಅಶ್ವಿನಿ ಗೌಡ ಅವರ ಮೇಲೆ ಇನ್ನೊಂದು ಸಂಕಷ್ಟ ದಾಖಲಾಗಿದೆ. ಶೋ ಒಳಗೆ ಸ್ಪರ್ಧಿ ರಕ್ಷಿತಾ ಅವರನ್ನು ಕುರಿತು ‘ಎಸ್ ಕ್ಯಾಟಗರಿ’ ಎಂಬ ಪದವನ್ನು ಬಳಸಿದ್ದಕ್ಕಾಗಿ ಅಶ್ವಿನಿ ಅವರ ವಿರುದ್ಧ ಪೊಲೀಸರು ನೋಟೀಸ್ ನೀಡಿದ್ದಾರೆ.
ಅಶ್ವಿನಿ ಅವರ ಈ ಪದ ಬಳಕೆಯನ್ನು ಖಂಡಿಸಿ, ಒಬ್ಬ ವಕೀಲ ಬಿಡದಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನಲ್ಲಿ, ಅಶ್ವಿನಿ ಅವರು ‘ಎಸ್ ಕ್ಯಾಟಗರಿ’ ಪದವನ್ನು ಬಳಸಿದ್ದು ಜಾತಿ ನಿಂದನೆ ಅಥವಾ ವ್ಯಕ್ತಿ ನಿಂದನೆಗೆ ಸಮಾನವೆಂದು ಆರೋಪಿಸಲಾಗಿತ್ತು. ದೂರಿನ ಅನ್ವಯ, ಬಿಡದಿ ಪೊಲೀಸರು ಎನ್‌ಸಿಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ತನಿಖೆಯ ಭಾಗವಾಗಿ, ಆರೋಪಿಗಳಿಗೆ ನೋಟೀಸ್ ನೀಡಲಾಗಿದೆ.
ಈ ದೂರನ್ನು ಸ್ಪರ್ಧಿ ಅಶ್ವಿನಿ ಗೌಡ್, ಕಲರ್ಸ್ ಚಾನೆಲ್‌ನ ಬಿಸಿನೆಸ್ ಹೆಡ್ ಪ್ರಶಾಂತ್ ನಾಯಕ್, ಕ್ಲಸ್ಟರ್ ಹೆಡ್ ಸುಷ್ಮಾ ಮತ್ತು ಶೋ ಡೈರೆಕ್ಟರ್ ಪ್ರಕಾಶ್ ಅವರ ವಿರುದ್ಧ ದಾಖಲಿಸಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರೆಸುತ್ತಾ, ಎಲ್ಲಾ ಆರೋಪಿಗಳಿಗೂ ನೋಟೀಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಕೋರಿದ್ದಾರೆ.
ಸದ್ಯ ಬಿಗ್ ಬಾಸ್ ಶೋ ಶೂಟಿಂಗ್ ಸ್ಥಳದಲ್ಲೇ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಪೊಲೀಸರು ಹೇಗೆ ವಿಚಾರಣೆ ನಡೆಸಬಹುದು ಎಂಬುದು ಚರ್ಚೆಯ ವಿಷಯವಾಗಿದೆ. ಬಿಗ್ ಬಾಸ್ ತಂಡದಿಂದಲೇ ಪೊಲೀಸರಿಗೆ ಮನವಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಮನವಿಯ ಅನ್ವಯ, ಪೊಲೀಸರು ಬಹುಶಃ ಶೂಟಿಂಗ್ ಸ್ಟೂಡಿಯೋಗೆ ತೆರಳಿಯೇ ಹೇಳಿಕೆ ದಾಖಲಿಸಿಕೊಳ್ಳಲು ಮಾಡಿರಬಹುದು. ಹೀಗಾಗಿ, ಅಶ್ವಿನಿ ಶೋ ಒಳಗೆ ಇರುವಾಗಲೇ ಪೊಲೀಸರು ತನಿಖೆ ನಡೆಸುವ ಸಾಧ್ಯತೆ ಇದೆ.
