ಕಾಂಗ್ರೆಸ್ ನಾಯಕರ ಬಿಜೆಪಿ ಸೇರ್ಪಡೆ, ಇಂಡಿಯಾ ಒಕ್ಕೂಟದಲ್ಲಿ ಬಿರುಕಿನ ಮಧ್ಯೆಯೇ ಕಾಂಗ್ರೆಸ್ಗೆ ಆದಾಯ ತೆರಿಗೆ ಇಲಾಖೆಯ ಶಾಕ್ ನೀಡಿದ್ದು, ಕೆಲ ವರ್ಷಗಳಿಂದ ತೆರಿಗೆ ರಿಟರ್ನ್ಸ್ನಲ್ಲಿ ವ್ಯತ್ಯಾಸವಾದ ಹಿನ್ನೆಲೆಯಲ್ಲಿ 1,700 ಕೋಟಿ ಪಾವತಿ ಮಾಡುವಂತೆ ನೋಟಿಸ್ ಜಾರಿಗೊಳಿಸಿದೆ. ತೆರಿಗೆ ನೋಟೀಸ್ಗಳನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ನಿನ್ನೆ ತಿರಸ್ಕರಿಸಿತ್ತು. ಅದರ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ನೋಟೀಸ್ ನೀಡಿದೆ.ಈ ನೋಟಿಸ್ ಕುರಿತು ಕಾಂಗ್ರೆಸ್ ತೀವ್ರವಾಗಿ ಕಿಡಿಕಾರಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು, ಏ.19ರಿಂದ ಲೋಕಸಭಾ ಚುನಾವಣೆ ಆರಂಭವಾಗುತ್ತಿದ್ದು, ಚುನಾವಣೆ ಹೊತ್ತಿನಲ್ಲಿ ಮೋದಿ ಸರ್ಕಾರ ಕಾಂಗ್ರೆಸ್ ಪಕ್ಷವನ್ನು ದಿವಾಳಿ ಮಾಡಲು ಪ್ರಯತ್ನಿಸುತ್ತಿದೆ. ಆರ್ಥಿಕವಾಗಿ ವಿರೋಧ ಪಕ್ಷಗಳ ಕತ್ತು ಹಿಸುಕುವ ಪ್ರಯತ್ನ ಮಾಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದ್ದಾರೆ.

